ಅಂತಿಂತಹವಳಲ್ಲ ನನ್ನ ಹೆಂಡತಿ,
ಅಪ್ಪಟ ಪುತ್ಥಳಿ, ಬಂಗಾರ,
ಕಲ್ಮಶವಿಲ್ಲದ ಮುಂಜಾನೆ ಇಬ್ಬನಿ;
ಗಂಗಾವತರಣ ಅವಳು,
ಕಾಡು ನಾಡು ಇಳಿಜಾರು ಇಳಿದರೂ
ಮಲಿನ ಮೈಗಂಟದ ಸ್ಫಟಿಕ ನಿರ್ಮಲ;
ಅಂತಿಂತಹವಳಲ್ಲ ನನ್ನ ಹೆಂಡತಿ,
ಅಪ್ಪಟ ಪುತ್ಥಳಿ, ಬಂಗಾರ.
ಬೆಂಕಿಯಲಿ ಪುಟಗೊಂಡ ಚಿನ್ನ,
ಸ್ವಾರ್ಥಕೊಳೆ ಕಳಚಿದ ಪರಿಶುದ್ಧ ರೂಪ;
ಚುಚ್ಚುವ ಮೊನೆ ಅವಳಲ್ಲೆಲ್ಲೂ ಇಲ್ಲ,
ಕುಂಬಾರನ ಆವೆಮಣ್ಣು,
ಕೈಯಾಡಿಸಿದ ಆಕಾರ,
ಮನಸೊಲಿದರೆ ಆಟಿಗೆಯ ಗೊಂಬೆ,
ಪ್ರತಿರೋಧ ಅವಳಲ್ಲಿ ಕಿಂಚಿತ್ತೂ ಇಲ್ಲ;
ಸ್ವರವೆತ್ತಿ ಕಣ್ಣಡರಿಸಿ ಕಂಡವಳೆ ಅಲ್ಲ.
ಪ್ರತಿನಿರೋಧಗಳ ಒಳಗೊಳಗೆ ನುಂಗಿ,
ವಿರೋಧಬಾಧೆಗಳ ಗೊಡವೆಯ ಮರೆವ
ಸದಾ ಶಾಂತಚಿತ್ತ ತಪಸ್ವಿನಿ ಅವಳು;
ಹಿತವರಿಗೆ ಸವಿಜೇನು,
ಮಿಕ್ಕವರಿಗೆ ಮೌನ, ಸೌಜನ್ಯ ವಿನಯ;
ಕೆಟ್ಟದನ್ನು ಕಾಣದ, ದ್ರೋಹವನ್ನು ಬಗೆಯದ
ಸಭ್ಯತೆಯ ಅಪರಾವತಾರ,
ನಿಷ್ಕಪಟತೆಯ ಯುಕ್ತ ಶಿಲ್ಪ ಅವಳು.
ಸೌಮ್ಯ ಹೃಮ್ಯ ಹೃದ್ಯ ಚಂದನದ ಗೊಂಬೆ,
ಒಳಗೊಳಗೆ ಅದಮ್ಯ ಶಕ್ತಿಯ ಚಿಲುಮೆ;
ದಮಿಸಿದಷ್ಟು ಪುಟಿಯುವ ಸುಪ್ತ ಚೈತನ್ಯ,
ಸತ್ಯದಲೆ ಸತ್ತ್ವ ಕಂಡವಳು ಅವಳು;
ತನ್ನೆಲ್ಲವನು ಬಿಟ್ಟು, ನನ್ನ ಬಳಿ ಬಂದು,
ಇನ್ನಿರದ ರೀತಿಯಲಿ ನನ್ನೊಡನೆ ಹೊಸೆದು,
ತ್ಸುನಾಮಿಯಲಿ ಹೊರ ದುಮುಕುತಿದ್ದ ನನ್ನ
ಇದ್ದಲ್ಲೆ ತನ್ನಲ್ಲೆ ನಿಲ್ಲಿಸಿದ ಶಕ್ತಿ.
ಇಟ್ಟ ಗುರಿಯನ್ನು ಬಿಟ್ಟು ನೋಡುವವಳಲ್ಲ,
ಅನಗತ್ಯಕ್ಕೆ ಕೈಯ ಚಾಚುವವಳಲ್ಲ,
ಕಂಡಕಂಡ ಕಡೆ ಕಣ್ಣಿಟ್ಟು ಓಡಿ ನಡೆದು
ಮೈಕೈ ಕೊಸರಿ ಕೆಸರು ಸಿಡಿಸುವವಳಲ್ಲ;
ತಪಸ್ಸನ್ನೆ ಗೈಯದ ಮಹಾತಪಸ್ವಿನಿ ಅವಳು,
ಬಂದಷ್ಟೆ ಸಾಕೆನ್ನುವ ವಿರಳ ಆತ್ಮತೃಪ್ತೆ;
ಕೋಪತಾಪಗಳ ಶಾಪ ಮುಟ್ಟದ ಅವಳು
ಸದಾ ಬೆಳಗುವ ಸುಂದರ ನಂದಾದೀಪ.
This poem has not been translated into any other language yet.
I would like to translate this poem