ಕೆಲವು ಅಲ್ಲಿ, ಕೆಲವು ಇಲ್ಲಿ,
ನಾನು ಮಾತ್ರ ಮಧ್ಯದಲ್ಲಿ,
ಆದುವು ಬೇಕು, ಇದುವು ಬೇಕು,
ಅಸ್ಥಿರತೆಯ ಬದುಕು ಇದುವು;
ಅತ್ತಇತ್ತ ಸೆಳೆತದಲ್ಲಿ
ನನ್ನ ಭಾರ ಹೃಸ್ವಗೊಂಡು,
ತರಗೆಲೆಗಳು ಹಾರುವಂತೆ,
ಹಿಂದೆಮುಂದೆ ಮೇಲೆಕೆಳಗೆ
ಎಡಕೆಬಲಕೆ ತುಯ್ದು ನಿಂತೆ,
ನನ್ನತನದ ಸನ್ನೆಗಾಗಿ
ಕಣ್ಣುಬಿಟ್ಟು ಪರೀಕ್ಷಿಸಿದೆ.
ನನ್ನಾತ್ಮ ಕಂಡ ತಾಳರಹಿತ ಭಾವಾತಿಶಯದ ಬುಗ್ಗೆ ಒಂದು,
ಪ್ರಾಣದಲ್ಲಿ ಪ್ರಾಣವಿಟ್ಟ ಅಪರಿಹಾರ್ಯ ಸವಿ ಜೀವ ಒಂದು;
ತ್ರಿಶಂಕು ನಾನು ಮಧ್ಯದಲ್ಲಿ, ದ್ವಂದ್ವ ದಿಕ್ಕು ಸೆಳೆಯುವಲ್ಲಿ,
ಕೈಲಾಗದಂತೆ ನಾನದೆಷ್ಟು ಕಾಲನಿರ್ಧಿಷ್ಟವಾಗಿ ನಿಲ್ಲಲಿ?
ಎರಡು ಕಣ್ಣು, ಅತ್ತ ಇತ್ತ -
ಜೀವವೊಂದು ಸ್ಥಿರತೆಯಿಂದ
ನಿಸ್ಪೃಹವಾಗಿ ಇರಲಸಾಧ್ಯ;
ಆತ್ಮಜೀವ ಬೇರೆಯಾಗಿ
ಬದುಕು ಹೇಗೆ ನಡೆಸಲಿ?
ಅತ್ತ ನಾನು ಹೋಗಬೇಕು,
ಇತ್ತ ನಾನು ಬದುಕಬೇಕು;
ಅತ್ತ ಇತ್ತ ಎರಡೂ ಇಲ್ಲ,
ಇದೆಂತ ವಿಧಿಯ ಕ್ರೂರ ವ್ಯಂಗ್ಯ?
ಎಲ್ಲಾವುಂಟು, ಏನೂ ಇಲ್ಲ,
ಜೀವನ್ಮ್ರುತದ ಚಿತ್ರ ನಾನು.
ನಿರ್ಧಾರಕ್ಕೊಂದು ಬರಲೆಬೇಕು, ಸ್ಥಿರಹೆಜ್ಜೆಯನಿಡಲೆಬೇಕು,
ಯಾಕೆಹೇಗೆಯಾವುದೆಂದು ಸ್ವಂತ ನಾನು ನಿರ್ಧರಿಸಬೇಕು;
ಆತ್ಮಪ್ರಾಣಗಳೆರಡೂ ನನ್ನಸ್ಥಿತ್ವದ ಉಗಮ, ಊರುಗೋಲು,
ಇದ್ದಂತೆ ಇದ್ದು ಮಧ್ಯದಿಂದ ಬದುಕುವುದೆ ನನಗುಳಿದ ಬಾಳು.
This poem has not been translated into any other language yet.
I would like to translate this poem