ನನ್ನ ತಂದೆ Poem by PRAVEEN KUMAR Kannada Poems

ನನ್ನ ತಂದೆ

ಕತ್ತಲಿನಿಂದ ಬೆಳಕಿಗೆ ತಂದ ದೇವರು ಅವರು,
ಬಾಗಿಲನು ತೆರೆದು ನಂದಾದೀಪ ಹಚ್ಚಿದವರು,
ಮುಚ್ಚಿದ ಕಣ್ಣನ್ನು ತೆರೆಸಿ ಲೋಕ ತೋರಿಸಿದರು,
ಮುಗ್ಗರಿಸಿದಾಗ ಕೈಹಿಡಿದು ಸರಿದಾರಿ ನಡೆಸಿದವರು,
ನನ್ನನ್ನು ನನ್ನ ಹಾಗೆ ಅನವರತ ಕಡೆದ ದಿವ್ಯ ಶಿಲ್ಪಿ;
ಎತ್ತರದ ವೇದಿಕೆಕಟ್ಟಿ ನನ್ನ ಪ್ರತಿಷ್ಠಾಪಿಸಲೆಂದು
ಸುಖದುಃಖ ಮರೆತು ದಿನರಾತ್ರಿ ಹೋರಾಡಿದ ಜೀವ;
ಬಿತ್ತಿದ ಬೀಜ ಮೊಳೆತು, ಗಿಡ ಮರವಾಗಿ, ಹೂವುಬಿಟ್ಟು
ಫಲಕೊಡುವ ಮೊದಲೆ, ಅಯ್ಯೋ, ಮರೆಯಾದರಲ್ಲ!

ನಾನು ತಾನುಯೆಂದು ಎಂದೂ ನನ್ನ ದೂರತಳ್ಳಿದವರಲ್ಲ,
ನೀನು ನಿನ್ನದುಯೆಂದು ನನಗೆ ತಾತ್ಸಾರ ತೋರಿದವರಲ್ಲ,
ತನ್ನಲ್ಲೇ ನನ್ನ, ನನ್ನಲ್ಲೇ ತನ್ನ ಪ್ರತಿಬಿಂಬ ಕಂಡ ಯೋಗಿ,
ತನ್ನ ಮೆರೆಯ ಮೀರಿ ಹಾರಿ ನಡೆದ ಹಿರಿಯ ಹರಿಕಾರ,
ತನ್ನ ಪಟ್ಟಿನಲ್ಲೆ ನನಗೆ ಪಟ್ಟಕಟ್ಟಿದ ಸಾಧಕ ಶ್ರೇಷ್ಠ ಅವರು;
ಮೂಡಿದ ಬೊಂಬೆ ಸುಟ್ಟು ಹದಕೆ ಬರುವುದಕೆ ಮೊದಲೆ
ಶ್ರಮಮರೆತು ಸರಿಯುವುದು ಇದು ಯಾವ ನ್ಯಾಯ?
ತನಗೆಂದು ದುಡಿದು ಸಾಧಿಸುವ ಜೀವ ಅವರದ್ದಲ್ಲ,
ಧರ್ಮಕರ್ಮ ಕರ್ತವ್ಯದ ದಾರಿ ಹಿಡಿದ ಪುಣ್ಯ ಜೀವ.

ನಾವು ಹಿಡಿದ ನಡೆದ ದಾರಿ ಸದಾ ಸೀದವಾಗಿರಲಿಲ್ಲ,
ಎಡಬಲ ತಿರುವುಗಳು ದಾರಿಯಲಿ ಸಾಮಾನ್ಯ ತಾನೆ?
ನಾನೂ ಎಡವಿದೆ, ಒಂದಲ್ಲ, ಎರಡಲ್ಲ, ಹಲವು ಬಾರಿ,
ಒಂದೊಂದೂ ಒಂದೊಂದು ಒದೆತ ಆ ಹಿರಿಯ ಜೀವಕ್ಕೆ;
ಬಂದದ್ದನ್ನೆಲ್ಲ ಎದೆಯಲ್ಲಿ ಒತ್ತೊತ್ತಿ ಹಿಡಿದು, ಕ್ಷಮಿಸಿ,
ಮತ್ತೆ ಕೈಹಿಡಿದೆ ಮುನ್ನಡೆಸಿದ ವಿಶಾಲ ಹೃದಯಿ ಅವರು;
ಗತಿಸಿದ ಅಪರಾಧಗಳ ಪುಂಖಾನುಪುಂಖಗಳ ಸರಣಿಗೆ
ತಪ್ಪೊಪ್ಪಿಗೆ ವಿವೇಚನೆಯ ದೀಪ ನನಗೆ ಹತ್ತುವ ಮೊದಲೆ,
ಭಾರದ ಎದೆಯಲ್ಲೆ ನನ್ನ ಬಿಟ್ಟು ಹೋದರು ನನ್ನ ತಂದೆ.

ಇದು ಒಂದಲ್ಲ, ಹಲವು ಜೀವನಗಳ ಧೀರ್ಘ ಬಂಧ,
ಒಂದರಿಂದ ಮತ್ತೊಂದಕ್ಕೆ ಹರಿವ ಋಣಾನುಬಂಧ;
ಅವರಿತ್ತ ನಕಾಶೆಯಲ್ಲಿ, ಅವರಿಟ್ಟ ಪರಿಮಿತಿಯಲ್ಲಿ
ಅವರ ಹೆಜ್ಜೆಗೆ ಹೆಜ್ಜೆಹಾಕಿದ ಬರೆ ಹಸುಗೂಸು ನಾನು,
ಅವರಾರೈಕೆಯಿಂದ ಬೆಳೆದು ನಿಂತ ಪುಟ್ಟ ಅರಳೀಮರ;
ಅವರದ್ದೊಂದೊಂದೂ ವಿವೇಚನೆಯ ಘನ ಹೆಜ್ಜೆ,
ಒಂದೊಂದೂ ಮುನ್ನೆಚ್ಚರಿಸುವ ಬಡಿದೆಬ್ಬಿಸುವ ಗೆಜ್ಜೆ;
ಅವರು ಬಾಳಿದ ಜೀವನದ ಬರಿಯ ಪ್ರತಿಫಲನ ನಾನು,
ಅವರಿಟ್ಟ ಮಣ್ಣಿಂದ ಮೂಡಿಬಂದ ಚಿಕ್ಕ ಬೊಂಬೆ.

COMMENTS OF THE POEM
READ THIS POEM IN OTHER LANGUAGES
Close
Error Success