ಹೂವಿನಂತೆ ಮೃದು ಮನೋಹರ ವರ್ಣವೈವಿಧ್ಯ ಆಗ,
ವಜ್ರದಂತೆ ಅಭೇದ್ಯ ವರ್ಣಾಲಂಕ್ರತ ಪ್ರಭಾಗುಚ್ಛ ಈಗ,
ಕಾಲಾಂತರದ ರೂಪಾಂತರದ ಪ್ರಭೃತಿಯೆ ನನ್ನ ಮಗ,
ದಶಕತೃಯದ ವೈಚಿತ್ರ್ಯ, ಏಳುಬೀಳುಗಳ ಕಾಲಾವೇಗ.
ಆಗ ಈಗಿನಂತಿರಲಿಲ್ಲ ಇವನು;
ಹುಣ್ಣಿಮೆಯ ಚಂದ್ರನಂತೆ ಶುಭ್ರ,
ಮಂದ ಬೆಳಕು, ಹಿತಮಿತದ ಚೆಲುವು,
ಲಕ್ಷ್ಮಣರೇಖೆ ದಾಟಿದವನಲ್ಲ,
ಹೇಳದೆಕೇಳದೆ ನಡೆದವನಲ್ಲ,
ತೋರಿದ ದಿಕ್ಕನ್ನು ಪ್ರಶ್ನಿಸಿದವನಲ್ಲ;
ಅವನೆಂದರೆ ನೋಡಿದವರಿಗೆಲ್ಲ ಒಲವು,
ಅವನು ಏನೇ ಮಾಡಿದರೂ ಗೆಲುವು;
ಅವನಲ್ಲಿ ಏನೋ ಆಂತರ್ಯದ ಚೆಲುವು,
ಅಕ್ಕರೆ ಸಕ್ಕರೆಯ ಜೇನುತುಪ್ಪದ ಸಿಹಿ,
ಅವನೊಡನಾಟ ಒಂದು ಆನಂದದ ಗಣಿ.
ಈಗ ನನ್ನ ಮೀರಿದೆತ್ತರ,
ನನಗೆ ದೀಪ ಹಿಡಿಯುವ ಬಿತ್ತರ,
ಊರುಗೋಲು, ನನಗೆ ಆಧಾರ,
ಅವನಲ್ಲೇನೋ ನನಗೆ ಧೈರ್ಯ ಸ್ಥೈರ್ಯ;
ಈಗ ಬೆಳದಿಂಗಳಿನಂತಲ್ಲ,
ಮೋಡವಿಲ್ಲದ ದಿನದ ಸೂರ್ಯನಂತೆ,
ದಿಟ್ಟ, ನೇರ, ಗುರಿಗೆ ಬಿಟ್ಟ ಬಾಣದಂತೆ;
ಸತ್ಯ ಪ್ರಾಮಾಣಿಕತೆಯ ವಜ್ರ ಅವನು,
ಆದರೂ ವರ್ಣಮಯ ವೈವಿಧ್ಯ,
ಅವನು ಹಿಡಿವ ದಾರಿ ಅಭೇದ್ಯ,
ಖಂಡತುಂಡ ಖಂಡಿತವಾದಿ;
ದೇಹಧಾರ್ಡ್ಯ, ಆತ್ಮ ವೈಢೂರ್ಯ,
ಅವನದು ಕಣ್ಣುಕುಕ್ಕುವ ತೇಜಸ್ಸು,
ಆದರೂ ತುಂಬು ಸಂಯಮದ ದಾರಿ;
ಹಿಂದೆಮುಂದೆ ನೋಡಿಯೆ ನಡೆವ,
ಹಿತಮಿತ ಗುಣಿಸಿಯೆ ನಿರ್ಧರಿಸುವ
ಅವನು ವಿವೇಚನೆಯ ಶ್ರೇಷ್ಠ ಪ್ರತೀಕ.
ಎಲ್ಲಿಂದ ಎಲ್ಲಿಯವರೆಗೆ ನಡೆಯಿತು ಅವನ ಪಯಣ!
ಯಾಕೆ ಹೀಗೆ ನಡೆಯಿತೆಂಬುವುದು ಕಾಲನೂ ಕಾಣ;
ಅಂದು ಅದು ಚಂದ, ಇಂದು ಇದು ಚಂದ, ಸೃಷ್ಟಿ ನಿಯಮ,
ಇದು ಅನುಪತ್ಯಗನುಸಾರದ ಪ್ರಕೃತಿಯ ನಿತ್ಯ ನಿಯಮ.
This poem has not been translated into any other language yet.
I would like to translate this poem