ನೀನು ಬಂದೆ Poem by PRAVEEN KUMAR Kannada Songs

ನೀನು ಬಂದೆ

ದಿಗಂತದಿಂದ ತೂರಿಬಂದ ನನ್ನ ಹೃದಯ ಚೆಲುವೆ ನೀನು,
ಯಾಕೆ ಹೇಗೆ ಎಲ್ಲಿಂದ ಬಂದೆ ಎಂದು ನನಗೆ ವಿಸ್ಮಯ;
ಉರಿ ಬಿಸಿಲಲಿ ತಂಪು ಕೊಟ್ಟೆ, ಮರುಭೂಮಿಗೆ ಚಿಗುರು ಕೊಟ್ಟೆ,
ಹೆಪ್ಪುಗಟ್ಟುವ ಹವೆಗೆ ನೀನು ವಸಂತಕಾಲದ ಜಿಗಿತ ಕೊಟ್ಟೆ;
ಕಾಲ ಕೋಲಾಹಲದಿ ಸುಟ್ಟು, ಬರಡುಗೊಂಡ ಈ ಬಡ ಜೀವಕೆ
ಹೊಸ ದಿಗಂತ, ಹೊಸತು ಆಶೆ, ಹೊಸತು ದಿಕ್ಕು ತಂದು ಕೊಟ್ಟೆ;
ಹೊಸತು ಲೋಕ ಕಟ್ಟಿಕೊಟ್ಟು, ಹೊಸತು ದೀಪ ಉರಿಸಿ ಬಿಟ್ಟು,
ನನ್ನಾತ್ಮದಲ್ಲಿ ಹೊಳಪು, ಚೈತನ್ಯದಲ್ಲಿ ದ್ವಿಗುಣ ಹುರುಪು
ಮೂಡಿಸಿರುವ ನೀನು ನನ್ನ ಆತ್ಮದಾಳದ ಕುಡಿ ಆತ್ಮವು.

ನಿನ್ನ ಕಂಡ ಮೇಲೆ ನನ್ನ ಬದುಕು ಕಂಡ ನೆಗೆತ ಹಲವು,
ಏನು ಕುಣಿತ, ಏನೋ ಸೆಳೆತ, ಸಾಧನೆಯೆ ಜೀವನವುಯೆಂದು,
ಹಲವು ಗುರಿಗಳನಿಟ್ಟುಕೊಂಡು, ಜೀವನವ ಮುಡಿಪುಯಿಟ್ಟು
ಮುಂದೆ ಮುಂದೆ ನಡೆಯುವಾಗ ಜೀವನವೇ ಸ್ವರ್ಗ ತಾನೆ?
ಒಂದೊಂದು ದಿನವೂ ನವನವೀನ ದಿವ್ಯ ಸುಂದರ ಅನುಭವ;
ನಿನ್ನ ಸಾನ್ನೀಧ್ಯ ನನಗೆ ಒಂದು ದಾರಿತೋರುವ ನಂದಾದೀಪ,
ತಪ್ಪು ಸರಿ ಪರಿಜ್ಞಾನದಲ್ಲಿ ನನ್ನನ್ನೆಚ್ಚರಿಸುವ ಹೃದಯಗೀತೆ,
ಏನೋ ಹರಿವು, ಏನೋ ಸ್ಫುರಣೆ, ಮುಂದೆ ನಡೆಯುವ ಪ್ರೇರಣೆ;
ನಿನ್ನ ನೆರಳಿನಲ್ಲಿ ನಾನು ಸೂರ್ಯನೆದುರಿನ ಸವಿ ಚಂದ್ರಮ.

ನೀನು ಹೊಸ ಜೀವಕೊಟ್ಟೆ, ಹೊಸ ಜವ್ವನ ನನಗೆ ಕೊಟ್ಟೆ,
ಬರಡು ಹಿಡಿದ ಜೀವನದಲ್ಲಿ ಹೊಸಹೊಸತು ಆಶೆಯಿಟ್ಟೆ;
ಹಗಲಲ್ಲಿ ಏನೋ ಹುರುಪು, ರಾತ್ರಿಯಲ್ಲಿ ಸುಖದ ಕನಸು,
ಒಳಗ್ಗೊಳಗೆ ಏನೋ ತುಡಿತ, ಹೊಸತು ಜೀವನ ಅನುಭವ;
ಒಂದುಒಂದು ಕೂಡಿ ಒಂದು; ಮತ್ತೊಂದು ಮೂಡಿ ಬರುವ ರೀತಿ,
ಕಲ್ಪನೆಯ ಮೀರಿ ನಿಂತ ಸುಖಸಂತೃಪ್ತಿಯ ಸಂಭ್ರಮ,
ಏನೋ ಸಾಧನೆ ಘಟಿಸಿದಂತ ಜೀವ ವಿಕಾಸನದನುಭವ;
ದೀಪವಾಗಿ ನೀನು ಬಂದು ನೇಸರಾಗಿ ನನ್ನಲ್ಲೆಲ್ಲ ಹಬ್ಬಿ,
ಶಕ್ತಿಯಾಗಿ ಒಳಗ್ಗೊಳಗೆ ಸ್ಫುರಿಸಿ ಜೀವ ಧನ್ಯಗೊಳಿಸಿದೆ.

READ THIS POEM IN OTHER LANGUAGES
Close
Error Success