ನಮ್ಮ ಪ್ರೀತಿ ಜ್ವಲಿಸಬೇಕು Poem by PRAVEEN KUMAR Kannada Songs

ನಮ್ಮ ಪ್ರೀತಿ ಜ್ವಲಿಸಬೇಕು

ದೂರದಲ್ಲೆಲ್ಲೋ ನಿಂತು ನೀನು
ನನ್ನ ಹೀಗೆ ಕರೆಯುವಾಗ,
ಹೇಗೆ ನಾನು ಬಳಿಗೆ ಬಂದು
ನಿನ್ನನ್ನಪ್ಪಿ ಮುದ್ದುಗೈದು
ಅದ್ವೈತವಾಗಿ ಮೆರೆಯಲಿ?

ನೀನು ಅಲ್ಲಿ, ನಾನು ಇಲ್ಲಿ,
ಪ್ರೀತಿ ಎಂಬ ಹೂವಬಳ್ಳಿ
ನಮ್ಮ ಹೀಗೆ ಹಿಡಿದು ಕಟ್ಟಿ
ಬಳಿ ಬಳಿಗೆ ಎಳೆಯುವಾಗ
ಹೇಗೆ ದೂರ ಇರಲು ಸಾಧ್ಯ?

ಇರುವ ದೂರ ನಮಗೆ ಭಾರ,
ಹೇಗೆ ದೂರ ಕ್ರಮಿಸಲೆಂದು
ನೀನು ನಾನು ಪಟ್ಟ ಪಾಡು,
ದಾರಿ ಹುಡುಕಿ ಹುಡುಕಿ ನಾವು
ಸೋತದ್ದನ್ನು ಮರತೆಯ?

ಎಲ್ಲಿ ಯಾವ ಮೂಲೆಯಲ್ಲಿ
ಯಾವ ನೆನಪು ತಂದುಕೊಂಡು
ಮತ್ತೆ ಮತ್ತೆ ಕರೆದು ನನ್ನ
ಕಳೆದ ಕನಸ ಹರಿಸಿ ಹೀಗೆ
ನನ್ನ ಕ್ಷುಬ್ಧ ಗೊಳಿಸುವೆ?

ದೂರ-ಕಾಲ ಮೀರಿದಂತ
ಪ್ರೀತಿಯಲ್ಲಿ ಬಿಗಿದ ನಾವು,
ದಾರಿ ದೂರವೆಂದು ಕೊಂಡು
ಮತ್ತೆ ಮತ್ತೆ ನೋವಿನಲ್ಲಿ
ಹೀಗೆ ಸದಾ ಕೊರಗಬೇಕೆ?

ದಾರಿ ದೂರವಿದ್ದರೇನು,
ಕಾಲಕೊಂಡಿ ಹರಿದರೇನು,
ನಿನ್ನನನ್ನ ಪ್ರೀತಿಎಂಬ
ಸೂರ್ಯಸಾಕ್ಷ್ಯ್ ಬಿಗಿತದಲ್ಲಿ
ಎಲ್ಲ ನೋವು ಮರೆತು ಬಿಡುವ.

ಪ್ರೀತಿಹರಿವ ದಾರಿಯಲ್ಲಿ
ದೂರ-ಕಾಲ ಯಾವ ಲೆಕ್ಕ?
ಪ್ರೀತಿಮೊರೆತದಲ್ಲಿ ಎಲ್ಲ
ದಿನದೆದುರಿನ ರಾತ್ರಿಯಂತೆ
ಕೊಚ್ಚಿಕೊಂಡು ಹರಿವುದು.

ದೂರ-ಕಾಲ ಮೀರಿನಿಂತ
ದಿಕ್ಕುದಿಕ್ಕಿನಲ್ಲಿ ಹಬ್ಬಿ
ಕಾಲಾಂತರಕ್ಕೆ ಹಬ್ಬಿ ಹರಿವ
ನಮ್ಮ ಪ್ರೀತಿ ಎಲ್ಲಿದ್ದರಲ್ಲಿ
ಬೆಳಗುವಂತ ಧ್ರುವ ತಾರೆ.

ಚಿಂತೆಬಿಡು, ನಗುವ ಚೆಲ್ಲಿ,
ದೂರವೆಂಬ ಕೊರತೆ ಬಿಟ್ಟು
ಇದ್ದಲ್ಲಿಂದ ನಾವು ಈಗ
ಪ್ರೀತಿ ಪುಷ್ಪ ಗಂಧ ಚೆಲ್ಲಿ
ನಮ್ಮಿರವನು ತೋರಬೇಕು.

ಪ್ರೀತಿಗೆಂದೂ ದೂರ ಇಲ್ಲ,
ದಾರಿಕ್ರಮಣದ ಚಿಂತೆ ಇಲ್ಲ,
ವಜ್ರದೊಳಗಿನ ವರ್ಣ ಪಟಲ
ದಟ್ಟವಾಗಿ ಹೊಳೆಯುವಂತೆ
ನಮ್ಮ ಪ್ರೀತಿ ಜ್ವಲಿಸಬೇಕು.

READ THIS POEM IN OTHER LANGUAGES
Close
Error Success