ನನ್ನ ಶೋಭ Poem by PRAVEEN KUMAR Kannada Songs

ನನ್ನ ಶೋಭ

ಅದೊಂದು ಸುಂದರ ಸ್ವಪ್ನ, ಚೇತೋಹಾರಿ ಪಯಣ,
ಚಿನ್ನದ ವರ್ಷದ ಹೊಳಪಿನಿಂದ ಸ್ನಿಗ್ಧವಾಗಿತ್ತು ಮನ;
ಆಕಾಶದ ತುಂಬ ಬಣ್ಣಬಣ್ಣದ ಕಾಮನಬಿಲ್ಲಿನ ಚಿತ್ರ,
ಕಂಡಕಂಡಲ್ಲೆಲ್ಲ ಹೂವು ಹಣ್ಣು ಹಸುರು ಸೌಗಂಧಗಳ ಪುಳಕ,
ನನಗೋ ಪುಕ್ಕಗಳು ಮೂಡಿ ಸ್ವರ್ಗಕ್ಕೆ ಹಾರುವ ತವಕ;
ಲೋಕವೆ ಸಂಗೀತವಾಗಿ, ಸುರಸುಂದರ ಉದ್ಯಾನವಾಗಿ,
ಸುಳಿವ ಗಾಳಿಯಲ್ಲೂ ಏನೋ ಮೋಡಿ ನೋಡಿದ ತೃಪ್ತಿ,
ಏನೋ ಝಳಕು, ಏನೋ ಬೆಳಕು, ಏನೋ ಆಶೆ ಆಸಕ್ತಿ.

ಇದು ನಿನ್ನನನ್ನ ಮಿಲನದ ಯಥಾವತ್ತು ಚಿತ್ರ,
ನಿನ್ನಾಗಮನ ತಂದ ಸುಖಾನುಭವದ ಪಾತ್ರ;
ನಿನ್ನ ಕಂಡ ದಿನದಿಂದ ನಾನು ನಾನಾಗಲಿಲ್ಲ,
ನಿನ್ನ ಪ್ರೀತಿಯುಂಡ ಮನ ಮತ್ತೇನೂ ಬಯಸಲಿಲ್ಲ.

ಬಂದವಳೆ ನೀನು ಪಂಚೇಂದ್ರಿಯಗಳ ಪೂರ್ತಿ ಗೆದ್ದು,
ನನ್ನ ಹೃದಯದೊಳಗಿದ್ದು, ನನ್ನಾತ್ಮ ಬೆಳಗಿಸಿಬಿಟ್ಟೆ;
ಹೃದಯದಲ್ಲೆಲ್ಲ ಹಬ್ಬಿತಬ್ಬಿ, ಎಡೆಎಡೆಯಲ್ಲಿ ನುಗ್ಗಿ,
ನನ್ನಾತ್ಮ ಗರ್ಭಗುಡಿಯ ಕೀಲಿಕೈ ಹೇಗೋ ಪಡೆದು,
ನನ್ನೊಳಗೆನೆ ನಿನ್ನ ದಿವ್ಯ ನಂದಾದೀಪ ಹಚ್ಚಿಕೊಟ್ಟೆ;
ಮತ್ತೆ ನಾವಿಬ್ಬರೂ ಎಂದೂ ಹಿಂದೆ ನೋಡಿದ್ದಿಲ್ಲ,
ನಮ್ಮ ಬಿಗಿದ ಪ್ರೀತಿ ಮತ್ತೆಂದೂ ನಂದುವುದಿಲ್ಲ,
ಆತ್ಮಆತ್ಮ ಹೊಸೆದು ಒಂದಾದ ಇದು ಆತ್ಮಕಥನ.

ಕಾಲಚಕ್ರ ನಿಯತಾವರ್ತನ ಪ್ರಕೃತಿಯ ನಿಯಮ ತಾನೆ?
ಏಳುಬೀಳುಗಳು ಜೀವನದ ಬಿಡದ ರಾತ್ರಿಹಗಲು ತಾನೆ?
ಬಾಳಪಥದಲ್ಲಿ ಎಂದೂ ಸೃಷ್ಟಿನಿಯಮಕ್ಕೆ ಪ್ರತಿಷೇಧವಿಲ್ಲ,
ನಮ್ಮ ಪರಿಭ್ರಮಣದಲೂ ಈ ಕ್ರಮಕೆ ವಿನಾಯತಿಯಿಲ್ಲ.

ನಮ್ಮಾಕಾಶದಲ್ಲೆ ಕಾರ್ಮೋಡ ಕವಿದು, ಕತ್ತಲಡರಿ,
ಮಧ್ಯಾಹ್ನದ ಸೂರ್ಯನೆ ಆಕಾಶದಿಂದ ಮರೆಯಾದ;
ಕಣ್ಣುಕುಕ್ಕುವ ಕತ್ತಲೆ, ಮೈ ನಡುಗಿಸುವ ಛಳಿ ಬೇರೆ,
ಎಡಬಲ ಹಿಂದೆಮುಂದೆ ತಿಳಿಯದೆ ತತ್ತರಿಸಿದೆವು ನಾವು;
ಏನೋ ದುಷ್ಟ ಶಕ್ತಿಗಳು ಅಡ್ಡ ಗೋಡೆಯಾಗಿ ನಿಂತು
ನಿನ್ನನ್ನು ನನ್ನಿಂದ ದೂರ ಸೆಳೆದುದರ ದುರ್ಧರ ನೋವು;
ಕೈಲಾಗದೆ ಕತ್ತಲಲಿ ದೂರದೂರ ಬಹುದೂರರಾದ ನಾವು
ಮತ್ತೆ ಜೊತೆಗೂಡುವ ದೂರದ ಬಯಕೆ ಎಂದೂ ಫಲಿಸಲಿಲ್ಲ.

ಇದು ಬಿರುಗಾಳಿಯ ಕತೆ, ಸುಳಿಗಾಳಿಯ ಕತೆ,
ಇದ್ದದ್ದನ್ನೆಲ್ಲ ಎತ್ತೊಯ್ದು, ಕಣ್ಣೀರ ಮಳೆ ಸುರಿಸಿದ ಕತೆ;
ಬಿರುಗಾಳಿಯ ಸುಳಿ ನಿಂತಾಗ ಉಳಿದದ್ದು ಅಲ್ಲಿ
ಕಣ್ಣೀರಿನಲ್ಲಿ ಕೊಚ್ಚಿಹೋದ ಭಗ್ನಾವಶೇಷಗಳ ಪಾಳುಹಳ್ಳಿ.

ಮಟಮಟ ಮಧ್ಯಾಹ್ನ ಕಳೆದು ಸೂರ್ಯ ಅಸ್ತಂಗತನಾದ,
ಸುತ್ತ ಕತ್ತಲು ಹಬ್ಬಿ, ದುಃಖದ ತ್ಸುನಾಮಿ ತುಂಬಿ ಹರಿದು,
ನೀನತ್ತ, ತಿಳಿಯದತ್ತ, ನಾನಿತ್ತ, ನೋವಲ್ಲಿ ಪಟ್ಟ ಈ ದುಃಖ!
ದುಷ್ಟಶಕ್ತಿ ಪ್ರೇತಗಳು ಹೌಹಾರಿ ನಮ್ಮ ಮೇಲೇರಿದರೂ,
ದಶಕಗಳ ವಿರಹ ನಮ್ಮ ಹಿಡಿಮುಡಿ ಹತಾಹತಿಸಿದರೂ,
ನೀನು ಹಚ್ಚಿದ ನಂದಾದೀಪ ಇನ್ನೂ ಚೆಲ್ಲುತ್ತಿದೆ ಬೆಳಕು,
ಒಂದು ಎರಡಾದ, ನೂರಾದ, ಥಳಥಳಿಸುವ ಹೊಳಪಲ್ಲಿ
ನಮ್ಮನ್ನನವರತ ಹೊಸೆದ ಕತೆ ಹೇಳುತ್ತಿದೆ ನೋಡು.

ಆಕಾಶದಲ್ಲಿ ನಕ್ಷತ್ರಗಳು ಮಿನುಗುವವರೆಗೆ,
ಬಿಲಿಯಾಂತರ ವಿಶ್ವಗಳು ಹಿಗ್ಗಿಕುಗ್ಗುವವರೆಗೆ,
ನಮ್ಮಾತ್ಮಗಳ ಬಿಗಿತ ಹಿಡಿತ ಹಿಂಗುವುದಿಲ್ಲ,
ನಮ್ಮೊಳಗಿನ ಆ ನಂದಾದೀಪ ನಂದುವುದಿಲ್ಲ.

READ THIS POEM IN OTHER LANGUAGES
Close
Error Success