ನೀನೆಲ್ಲಿದ್ದರೂ ನನ್ನವಳು,
ನೀ ಹೇಗಿದ್ದರೂ ನನ್ನವಳು,
ಮತ್ತೇಕೆ ನಮಗೆ ಭಯ?
ಮತ್ತೇಕೆ ಹೃದಯ ಕಂಪನ?
ಈ ಘೋರ ಭಯ ಸಿಂಪನ?
ಹೂವಿನ ಹೊರತು ಕಂಪು ಇರುವುದುಂಟೆ?
ಆಕಾಶದ ಹೊರತು ಸೂರ್ಯಚಂದ್ರ,
ಅಮರಾವತಿಯ ಬಿಟ್ಟು ರಾಜ ಇಂದ್ರ,
ಬೆಳಕನ್ನು ಮೆರೆತು ನಂದಾದೀಪ
ಅಸ್ಥಿತ್ವದಲ್ಲೆಂದೂ ಇರುವುದುಂಟೆ?
ನನ್ನಿಂದೆಷ್ಟು ದೂರ ನೀನಿದ್ದರೂ,
ವಿಧಿ ಅಡೆತಡೆಗಳ ಗೋಡೆ ಸಾಲು
ನಮ್ಮನದೆಷ್ಟು ದೂರ ದೂರಕ್ಕೊಗೆದಾಗಲೂ,
ಮೂಡಲಲಿ ದಿನದಿನ ನಗುವ ಸೂರ್ಯನಂತೆ,
ಚಳಿಯೊಡೆದು ಜಿಗಿಯುವ ವಸಂತನಂತೆ
ಮತ್ತೆಮತ್ತೆ ನಾವು ಕೂಡುವುದು ಸತ್ಯ,
ನಮ್ಮ ಐಕ್ಯತೆಯೆ ಪ್ರಕೃತಿಯ ಮೂಲ ಸತ್ಯ.
ಒಂದು ಸಿಡಿದು ಎರಡಾಗುವಾಗ ನೋವು
ಸಹನೆಯ ಮೀರಿ ಹಿಂಡುವುದು ಲೋಕ ನಿಯಮ,
ಸಿಡಿದದ್ದೊಂದಾಗಿ ಮತ್ತೆ ಕೂಡಿದಾಗ, ಸುಖ,
ಕಲ್ಪನೆಗೂ ಕಾಣದ ಪರಮಾನಂದ ಹರ್ಷ;
ಈ ಕಾಲವರ್ತುಲದಲ್ಲಿ ಚಡಪಡಿಸುವ ನಾವು
ಮತ್ತೊಮ್ಮೆ ಕೂಡುವುದು ಯಾಮ ನಿಯಮ;
ಸುಖದುಃಖದ ವಿಷಮ ಚಕ್ರದ ಪರಿಧಿಯಲ್ಲಿದ್ದು
ಈ ಏರಿಳಿತಕ್ಕೆ ನಾವು ಬೆದರುವುದು ಸಲ್ಲ;
ಮೇಲೇರಿದ್ದು ಕೆಳಗೆ ಇಳಿಯಲೇ ಬೇಕು,
ಕೆಳಗಿಳಿದದ್ದು ಮತ್ತೆ ಮೇಲೆ ಏರಲೇ ಬೇಕು;
ಮೇಲೆ ಕೆಳಗಿನ ಚಲನೆ ಎಂತು ನಡೆದರೂ ನಾವು
ನಮ್ಮತನ ಬಿಟ್ಟು ಎಂದೂ ವಿಭಜಿಸುವುದಿಲ್ಲ,
ಎಲ್ಲಿದ್ದರೂ ನಾವು ದೂರ ದೂರವಾಗುವುದಿಲ್ಲ.
ಪ್ರಿಯಬಂಧನದಲ್ಲಿ ದೂರವೇ ಇಲ್ಲ,
ಪ್ರಿಯಬಂಧನದಲ್ಲಿ ಭಯವೆಂಬುವುದಿಲ್ಲ,
ವಿಧಿಯೇನು ಕುಕ್ಕಿದರೂ, ಕಕ್ಕಿದರೂ
ಪ್ರಿಯಬಂಧನವನ್ನು ಕಡಿಯುವುದಿಲ್ಲ;
ಈ ಧೈರ್ಯಸ್ಥೈರ್ಯ ಗಟ್ಟಿ ತಾಳಿ ನಾವು
ನಮ್ಮ ಬಂಧದ ಸ್ಥಿರ ಗುಟ್ಟನ್ನರಿತು,
ವರ್ಷವರ್ಷ ಸುರಿವ ಹೊಸಮಳೆಯಂತೆ
ಸ್ಥಿತಪ್ರಜ್ಞತೆ ಸ್ಥಿರತೆ ತೋರಬೇಕು;
ಪ್ರೀತಿಚಿಪ್ಪಿನೊಳಗಡೆ ಭದ್ರ ಬೀಗಬಿಗಿದು
ಕೀಲಿಕೈ ದಿಗಂತದಾಚೆ ಬಿಸುಟ ನಮಗೆ
ಮತ್ತೇಕೆ ಇಲ್ಲದ ಭಯ?
ಮತ್ತೇಕೆ ಹೃದಯ ಕಂಪನ?
ಈ ಘೋರ ಭಯ ಸಿಂಪನ?
ನಾನೆಲ್ಲಿದ್ದರೂ ನಿನ್ನವನು,
ನಾ ಹೇಗಿದ್ದರೂ ನಿನ್ನವನು,
ಇದ ತಿಳಿದು ನಾವು ಬದುಕಬೇಕು.
This poem has not been translated into any other language yet.
I would like to translate this poem