ತೃಪ್ತಿ Poem by Praveen Kumar in Divya Belaku

ತೃಪ್ತಿ

ನನ್ನ ಮನಸಿನಾಶೆಯಾಗಿ ಅವಳು ಬಂದು ನನ್ನ ಹಿಡಿದು
ನಲ್ಲನೆಂದು ಗಲ್ಲಹಿಡಿದು ಮೆಲ್ಲ ಮುತ್ತು ಬೆಲ್ಲ ಕೊಟ್ಟು
ಮುಖಕೆ ಮುಖವನಿಟ್ಟು ನಕ್ಕು ಉಸಿರುಗುಸಿರು ಬಿಸಿಯ ಬೆರೆಸಿ
ಎದೆಯ ಮೇಲೆ ಎದೆಯನಿಟ್ಟು ಪ್ರೇಮ ತಿದಿಯನೊತ್ತಿದಾಗ
ಕತ್ತಲುದುರಿ, ಬೆಳಕು ಚದರಿ, ಬಣ್ಣಬಣ್ಣಲೋಕವಾಗಿ
ಕೋಟಿ ಕೋಟಿ ನಕ್ಷತ್ರರಾಶಿ ಹರಿದು ನಲಿದು ನನ್ನೊಡಲು ಸೇರಿ
ಕನಸು ನೆನಸು ಭೇದ ಮರೆತು ಹೊಸತು ಭಾವ ಹೊನಲು ಹರಿಸಿ
ಹೊಸತು ಲೋಕ, ಹೊಸತು ರೂಪ, ಹೊಸ ದಿಗಂತ ತೆರೆದು ಕೊಡಲು
ಸುಪ್ತವಿದ್ದ ತೃಪ್ತಭಾವ ದಡವ ಮೀರಿ ಬಿಚ್ಚಿ ಹರಿದು,
ಅಂತರಾತ್ಮ ರೆಕ್ಕೆಯೊಡೆದು ಇಚ್ಛಾವರ್ತಿ ಹಾರಿ ಜಿಗಿಯೆ,
ತೋಳು ಚಾಚಿ ಅವಳ ಹಿಡಿದು ಭದ್ರವಾಗಿ ತಬ್ಬಿಕೊಂಡೆ,
ಲೋಕ ಮರೆತು, ಒಳಗೆ ಎಳೆದು ನನ್ನಲ್ಲವಳ ಬಿಗಿದುಕೊಂಡೆ.

ಹಲವು ಪದರಿನಾಳದಲ್ಲಿ ದಟ್ಟ ಗುಪ್ತ ಕತ್ತಲಲ್ಲಿ
ಒಂಟಿಯಾಗಿ ಅಡಗಿ ಕೂತು ನನ್ನನೆಂದೋ ಮರೆತ ಅವಳು
ಹೇಗೋ ಏನೋ ಇಂದು ಬಂದು ನನ್ನ ಮನದ ಕದವ ಬಡಿದು,
ಗೋಡೆ ಒಡೆದು, ಹೊಸಿಲು ದಾಟಿ, ನನ್ನ ಜೊತೆಗೆ ಮಂಚವೇರಿ
ಸರಸದಾಟದಿಂದ ಒಲಿಸಿ, ನೃತ್ಯಗಾನದಿಂದ ರಮಿಸಿ
ಹೊರಗೆ ಹರಿಸಿ, ಒಳಗೆ ಸುರಿಸಿ, ಹೊಸತು ಜೀವ ಕೊಡುವಳು,
ಮೈಗೆ ಮೈಯನಿಟ್ಟು ಮಿಂಚು ಹೃದಯದಲ್ಲಿ ತರುವಳು;
ಏನು ಕಾವು, ಮಂಜು ಕರಗಿ, ಗಂಗೆಯಾಗಿ ಭೋರ್ಗರೆದು ಹರಿದು
ಕೋಪತಾಪ ದಣಿವು ಬವಣೆ ಕೊಚ್ಚಿಕೊಂಡು ಹೋುತು;
ಹೊಸ ದಿಗಂತ, ಹೊಸತು ದೃಶ್ಯ, ಮೈಯ ತುಂಬ ಏನೋ ಪುಳಕ,
ವಿರಹ ದಾಹ ಹಸಿವು ಇಂದು ರಂಧ್ರ ರಂಧ್ರ ಸಿಗಿದು ಬಗೆದು
ಕಾಲ ಬೇರಿನಿಂದ ಸಿಡಿದುಕ ಅವಳ ಮೈಯ ಮುಗಿುತು.

ಮೂರ್ತಿರಹಿತ ಗರ್ಭಗುಡಿಗೆ ದೇವರೊಂದು ಬಂದು ಕೂತು,
ಪ್ರಜೆ, ತೀರ್ಥ, ಮಂತ್ರಘೋಷ, ನಂದಾದೀಪ ಕೂಡಿತು,
ಪಾಳುಬಿದ್ದ ಭಗ್ನರಾಜ್ಯ ಅವಳ ದಿವ್ಯ ಸ್ಪರ್ಷದಿಂದ
ಚಿಗುರಿ ಎದ್ದು ಚೈತನ್ಯವೊಡೆದು ತಲೆಯನೆತ್ತಿ ನಿಂತಿತು,
ಮರಳುಗಾಡು ಒದ್ದೆಗೊಂಡು ಜೀವರಾಶಿ ಕವಲುಗೊಂಡು,
ಏನು ಸೊಗಸು, ಏನು ಸುಖವು, ಜೀವ ಜೀವ ಕೂಡಿತು;
ಧ್ರುವಧ್ರುವ ಕೂಡಿಯೊಂದು ಹೊಸತು ಜೀವ ಮೂಡಲು,
ಮನಸಿನಾಶೆ ಪೂರ್ತಿಗೊಂಡು, ತೃಪ್ತಿ ಜೀವ ತುಂಬಿತು;
ದೇಹದಲ್ಲಿ ಧರಿಸಿಯವಳ, ಜೀವದಲ್ಲಿ ಪ್ರತಿಬಿಂಬಿಸಿ,
ಪೂರ್ಣರೂಪಿ ಚಂದ್ರನಂತೆ ಹಾಲು ಬೆಳಕು ಸುತ್ತ ಚೆಲ್ಲಿ
ಮೂಡಲಿಂದ ಪಡುವಿನತ್ತ ತಲೆಯನಿತ್ತಿ ನಡೆಯುವೆ,
ಎದೆಯ ರಂಧ್ರದಾಳದಲ್ಲಿ ಆವಳನಿಟ್ಟು ರಮಿಸುವೆ.

Tuesday, April 26, 2016
Topic(s) of this poem: life,love
COMMENTS OF THE POEM
READ THIS POEM IN OTHER LANGUAGES
Close
Error Success