ಆಸೆ Poem by Praveen Kumar in Divya Belaku

ಆಸೆ

ನಿನ್ನ ನೋಡಬೇಕೆನುವಾಸೆ ಮೈಮನ ತುಂಬಿನಿಂತಿದೆ ನೋಡು,
ನಿನ್ನಾಸೆ ಭಾವರೋಧನವಾಗಿ ಉಕ್ಕೇರಿ ಚಿಮ್ಮುತ್ತಿದೆ ಹಾಡು;
ಎಲ್ಲಿ ನೋಡಿದರಲ್ಲಿ, ಕಲ್ಲುಮುಳ್ಳು ಕಳ್ಳಿಗಂಟಿಗಳಿರುವಲ್ಲಿ,
ನೀನಾವ ಮರೆಯಲ್ಲಿ ನನಗಾಗಿ ತಡಪಡಿಸುವೆಯೋ ಏನೋ;
ನಮ್ಮಿಬ್ಬರಂತರ, ದೂರ, ನಾವಿಬ್ಬರರಿತವರಲ್ಲ,
ನಮ್ಮ ಮಧ್ಯದ ದಿಬ್ಬದರಿ ದುರ್ಭರತೆ ನಾವು ಅಳೆದವರಲ್ಲ;
ಯಾವ ದಿಕ್ಕಿಗೆ ತಿರುಗಿ ನೀನಿರುವ ಕಡೆ ನೋಡಲಿ ಹೇಳು,
ಹೃದಯ ಬಯಕೆಯ ದಿಕ್ಕು ನಮಗುಳಿದೊಂದೆ ಸಮಾಧಾನ,
ಕತ್ತಲಿನ ಬಿತ್ತಿಯೊಳಗಿಂದ ನಮ್ಮ ಕಣ್ಣಿನ ದಾಹದ ಮಿಂಚು
ಅದೆಲ್ಲೋ ಸುತ್ತಾಡಿ ಕೂಡೆ ಮುತ್ತಿಡುತ್ತಿರಬೇಕು;
ನಮ್ಮ ಹೃದಯದ ಭಾವದೊತ್ತಡದುಬ್ಬರದ ಧಾರೆ
ಎಲ್ಲೋ ನಮ್ಮರಿವಿಗೆ ಮೀರಿ ಒಂದಾಗಿ ಹರಿಯುತ್ತಿರಬೇಕು.

ನಾನೆಷ್ಟು ನಡೆದರು ನಿನ್ನ ಸ್ಥಾನ ತಲಪೆನು ಚಿನ್ನ,
ಕಾಲ-ಸ್ಥಳಗಳ ಕ್ಲಿಷ್ಠ ಬಂಧನದ ಕೈದಿಗಳು ನಾವು;
ನನ್ನ-ನಿನ್ನ ಬಂಧನದ ವಜ್ರದುಂಗುರದ ಬಿಗಿ ಹಿಡಿತ
ಕಾಲ-ಸ್ಥಳಗಳ ಮೀರಿ, ಭಾವದೋಕುಳಿಯಾಗಿ
ಅಶರೀರ ಸ್ಥರದಲ್ಲಿ ಒಂದಾಗಿಸುವುದು ನಮ್ಮ;
ಕಾಲಾಂತರದಾಳದಲಿ ಬೆಸೆದಿರುವ ನಮ್ಮತನ
ನೆಲಮೀರಿ ಮೇಲೆದ್ದಾಗ ಕವಲೊಡೆದುÀ ಹರವಿತೇಕೆ?
ಅಗೋಚರ ಬುಡದಡಿಯಲ್ಲಿ ಮೈಬಳಸಿ ಜೊತೆಯನುಭವಿಸಿ
ಕೊಂಬೆ ರೆಂಬೆ ತುಂಬ ಸಾರ ತುಂಬವ ಈ ಜೀವನದಾಟ;
ಅದೃಶ್ಯ, ಅಪರಿಚಿತ ಸಂಕೋಲೆಗಳ ಪ್ರಕೃತಿಯಾಟ
ನನ್ನ-ನಿನ್ನ ಬಂಧನದ ವಿಪನ್ನ ವಿಪರ್ಯಾಸ;
ಅಮೂಲಾಗ್ರ ಮೈಬೆಸೆವ ಕಲ್ಪತರು ನಾವೇಕಾಗಿಲ್ಲ?

ಯಾವುದೋ ಮರೆುಂದ ಮೇಲೇರುವ ನಿನ್ನ ಕರೆ
ನನ್ನ ಭಾವಪುಚ್ಛವ ಕೆದರಿ ಹಾರಲೆಳಸುತ್ತಿದೆ ನೋಡು;
ಬೆಂಕಿ ತಗುಲಿದ ಸುಡಿಮದ್ದು ಉಗ್ರಾಣದ ಹಾಗೆ,
ಗುಡುಗಿ ಸಿಡಿದು ಹಬ್ಬಿ ಉರಿಯುತ್ತಿದೆ ನನ್ನ ಹೃದಯ;
ನಮ್ಮ ಮೂಲಕ್ಕಿಳಿದು ನಾವು ನಮ್ಮ ನೋಡದ ಹೊರತು,
ನಮ್ಮ ವಿಭಿನ್ನ ಮೈಬಳಸು ಕಣ್ಣು ತೆರೆಸದ ಹೊರತು,
ತೃಪ್ತಿ, ಸುಖ ಶಾಂತಿ ನಮ್ಮಲ್ಲಿ ಬರಬೇಕೆಲ್ಲಿಂದ?
ಭಾವರೋಧನ, ಹಾಡು, ರಕ್ತಕಣಕಣದಾಸೆ
ಅನವರತ ಹರಿಯಲೆ ಬೇಕು ನಿನ್ನ ನೋಡುವವರೆಗೆ;
ಇನ್ನೆಷ್ಟು ದಿನ, ವರುಷ ಈ ವಿರಹದಾಹದ ಬೇಗೆ?
ಇನ್ನೆಲ್ಲಿಯವರೆಗೆ ಬಯಕೆಧಾರೆಗೆ ಕೃತಕ ಕಲ್ಕಟ್ಟು,
ಬಯಸುವ ಜೀವಗಳೆರಡಕ್ಕೆ ದುರ್ಭರತೆಯ ಬೇಡಿ?

Tuesday, April 26, 2016
Topic(s) of this poem: love
COMMENTS OF THE POEM
READ THIS POEM IN OTHER LANGUAGES
Close
Error Success