ಕಾದು ಕುಳಿತೆ Poem by Praveen Kumar in Divya Belaku

ಕಾದು ಕುಳಿತೆ

ನಾನೆಷ್ಟು ಕಾದುಕುಳಿತೆ ನೀನು ಬರುವೆಯೆಂದು,
ನೀನು ಬರಲಿಲ್ಲ, ನನ್ನಾಶೆಯನು ತರಲಿಲ್ಲ;
ಕಾದು ಕಾದು ಕೋಣೆಯ ಗೋಡೆ ಬಿರುಕು ಬಿಟ್ಟುವು,
ಕವಿದ ಕತ್ತಲ ಸಾಂದ್ರಗೂಡು ಹಲವು ವರುಷ ಕಂಡವು,
ನೀನಾದರೂ ಬರಲಿಲ್ಲ, ನನ್ನಾಶೆಯ ಮುಖ ತೋರಲಿಲ್ಲ.

ದಿನ ವರುಷಗಳುದ್ದ ನಿನ್ನನ್ನು ಕಾಯುವುದೊಂದೆ ಕೆಲಸ,
ದೇಹ ಮನಸೆರಡು ನೋಡು ಜಡ್ಡುಹಿಡಿದಿದೆ ಈಗ;
ಕುಳಿತ ನೆಲ ಬಾುಬಿಟ್ಟಿದೆ, ಧೂಳು ಬಲೆ ತುಂಬಿಬಿಟ್ಟಿದೆ,
ಕತ್ತಲು ಕಟ್ಟಿದ ಕಣ್ಣಲ್ಲಿ ಕುರುಡು ಕವಿದಿದೆ,
ನೀನಿನ್ನು ಬರುವಾಸೆ ದೂರ ಜಾರುತ್ತಿದೆ ಈಗ.

ನೀನೇಕೆ ಬರಲ್ಲಿಲ್ಲ ನಾನು ಕೇಳುವ ಹಾಗಿಲ್ಲ,
ನೀನೆಂದು ಬರುವೆಯೆಂದು ಯಾರಿಗೂ ತಿಳಿದಿಲ್ಲ;
ನಾನು ಕಾಯುವೆನೆಂದೆ ನೀನೋಡಿ ಬರಬೇಕು,
ನೀನು ಬರುವ ತನಕ ನಾನು ಕಾಯುತ್ತಿರಬೇಕು,
ನೀನು ಬರಲಿಲ್ಲವೆಂದೆ ನಾನಿನ್ನೂ ಕಾಯುತ್ತಿರುವೆ.

ನನ್ನೊಡನೆ ನಿನಗಾಗಿ ಕಾಲರಾಯ ಕಾಯಲ್ಲಿಲ್ಲ,
ಸಂವತ್ಸರಗಳುರುಳಿ ಥಂಡಿ ನೆಲಾಕಾಶ ಹಬ್ಬಿತು ನೋಡು;
ಬಿಸಿ ತಗ್ಗುತ್ತಿದೆ, ನಗು ಕುಗ್ಗಿ ಮಬ್ಬು ಕವಿಯುತ್ತಿದೆ,
ಮನಸು ತುಂಬಿದ ನನ್ನಾಶೆ ಕರಗಿ ನೆಲದಲಿಂಗುತ್ತಿದೆ,
ಅಭ್ಯಾಸ ಬಲದಲಿ ನಾನಿನ್ನೂ ನಿನ್ನ ಕಾಯುತ್ತಿರುವೆ.

ನನಗುಳಿದಿಲ್ಲ ನೀನಿನ್ನು ಬರುವೆಯೆನ್ನುವಾಸೆ,
ಬಂದೆನ್ನ ಮನದಾಸೆ ತುಂಬಿತರುವಾಸೆ;
ಕಾದು ಬಳಲಿದ ದೇಹ ದಟ್ಟ ಕತ್ತಲಲ್ಲಡಗಿ,
ನೋವು ನಿರಾಶೆಯ ಮರೆತು ಗಾಢ ನಿದ್ರೆ ಮಾಡಲೆಂದಾಸೆ,
ನಿದ್ರೆ ಸಾಂದ್ರತೆಯಲ್ಲೆ ನಿನ್ನ ನನ್ನ ಮರೆಯುವೆನೆಂಬಾಸೆ.

Tuesday, April 26, 2016
Topic(s) of this poem: love
COMMENTS OF THE POEM
READ THIS POEM IN OTHER LANGUAGES
Close
Error Success