ಬೇಗ ಬಾ Poem by Praveen Kumar in Divya Belaku

ಬೇಗ ಬಾ

ನೀನು ಬರುವಿಯೆಂದು ನಾನು
ಊಟ ನಿದ್ರೆ ಸ್ನಾನ ಮರೆತು,
ಹಗಲು ರಾತ್ರಿ ಬೇಧ ಮರೆತು
ಒಳಗೆ ಹೊರಗೆ ತಿಕ್ಕಿತೊಳೆದು,
ಎಲ್ಲ ಬಾಗಿಲನ್ನು ತೆರೆದು
ಎಷ್ಟು ದಿನಗಳು ಕಾಯಲಿ?

ಬರುವೆನೆಂದೆ ಹೋದವಳು
ವರುಷಮೇಲೆ ಬಳಿಗೆ ಬಂದು,
ದೂರದಲ್ಲಿ ಈಗ ನಿಂತು,
ಕಣ್ಣುಹೊಡೆದು, ಮರುಳುಮಾಡಿ,
ಮುಚ್ಚುಮರೆಯ ಆಟವಾಡಿ
ಯಾಕೆ ಹೀಗೆ ಪೀಡಿಸುವೆಯೋ?

ನಿನ್ನ ಕಾದು ಕಾದು ನಾನು
ಅಲ್ಲಿ ಇಲ್ಲಿ ಎಲ್ಲ ಹಿಡುಕಿ,
ಎಲ್ಲೋ ದಾರಿ ತಪ್ಪಿತೆಂದು,
ಇನ್ನು ನೀನು ಬರಲಾರೆಯೆಂದು
ನಿರಾಶೆುಂದ ತಿರುಗಿದಾಗ
ಹೇಗೋ ನೀನು ಬಂದುಬಿಟ್ಟೆ.

ಕೈಯ ಎನಗೆ ಬೀಸಿ ಬೀಸಿ,
ಹೋದ ಹೆಣ್ಣು ತಾನುಯೆಂದು,
ತಿರುಗಿ ಈಗ ಬಂದೆನೆಂದು
ನನ್ನ ಎದುರು ತೋರಿದವಳು
ತನ್ನಕಡೆಗೆ ಸೆಳೆದುಬಿಟ್ಟು,
ಇದಾವ ಆಟ ಆಡುವೆ?

ನಾನು ನೋಡು ಚೂಟಿಯಲ್ಲ,
ನಿನ್ನ ನೋಡಿ ತಿಳಿಯಲಿಲ್ಲ,
ಕೆಲವು ಕಾಲ ಕಾದೆನು;
ಗುರುತು ನನಗೆ ಮೂಡಿದಾಗ,
ನಿನ್ನನೊಳಗೆ ಕರೆಯುವಾಗ
ಯಾಕೆ ಹೀಗೆ ಹೊಯ್ದಾಡುವೆ?
ನೀನು ನನಗೆ ಬೇಕೇ ಬೇಕು,
ನಿನ್ನ ಹೊರತು ಅಪೂರ್ಣ ನಾನು,
ನಾನು ನಿನ್ನವಮಾತ್ರನು;
ಸ್ವರ್ಗವಿರಲಿ, ನರಕಬರಲಿ,
ನೀನು ನನ್ನ ಸತ್ತ್ವ, ಜೀವ,
ನೀನೊಂದೆ ನನ್ನದೆಲ್ಲವೂ.

ನೀನಿಲ್ಲದಾಗ ನನ್ನ ಪಾಡು
ನೋವು ತುಂಬಿದಂತ ಹಾಡು;
ಊರುಕೇರಿ ಮರೆತು ನಾನು
ನಿನ್ನ ನೆನಪುಗುಂಗಿನಲ್ಲಿ,
ದಿನರಾತ್ರಿ ಕಣ್ಣೀರನಿಳಿಸಿ
ಇಷ್ಟು ಕಾಲ ಕಾದೆನು.

ಕಾದ ನೋವು ಫಲನೀಡುವಾಗ,
ಮಬ್ಬುಕಳೆದು ಕಿರಣ ಮೂಡುವಾಗ,
ಛೇಡಿಸುವುದಿನಿತು ನ್ಯಾಯವೆ?
ನೀನಿಷ್ಟು ನನಗೆ ಕಠಿಣವಾಗಿ,
ನನ್ನನಿನಿತು ಕಡೆಗಣಿಸುವಾಗ
ನಾನಾದರೇನು ಮಾಡಲಿ?

ನೀನು ಬಳಿಗೆ ಬರಲೆಬೇಕು,
ನಾನು ನಿನ್ನ ಕೂಡಬೇಕು;
ಇದು ನನ್ನ ನಿನ್ನ ಧರ್ಮ,
ಇದು ದೈವ ಕಾಲನಿಯಮ;
ಕಾಲಕೂಟ ನಿಯಮಮರೆತು
ಇನ್ನು ಕಾಲಹರಣ ಸಲ್ಲ.

ನನ್ನ ನಿನ್ನ ಋಣಾನುಬಂಧ
ಕಾಲಮೂಲದಿಂದ ಬಂದ
ಆಜನ್ಮದಿಂದಿಳಿದ ಸಂಬಂಧವು;
ಎಲ್ಲೋ ಹೇಗೋ ಸುತ್ತಾಡಿದರೂ
ಕೊನೆಗೆ ನಾವು ಸೇರಬೇಕು,
ಇದೆಮ್ಮ ಸುವಿಧಿ, ಭವಿಷ್ಯವು.

ಸಾಕಿನ್ನು ನಿನ್ನ ನನ್ನ ಬೇಧ,
ಸಾಕೀಪರಿಯ ಅಪಸ್ವರ;
ಭೂಮಿಚಂದ್ರರಂತೆ ಸೇರಿ,
ನಮ್ಮ ಧಾಟಿಗೆ ಶ್ರುತಿಯಕೊಟ್ಟು,
ನನ್ನನಿನ್ನೇಕ ತಾನದಲ್ಲಿ
ವಿಲೀನಗೊಳಲು ಬೇಗ ಬಾ.

ಕಾಲಯಂತ್ರದಾಳದಲ್ಲಿ
ಜನ್ಮಜನ್ಮ ಜೊತೆಯಬಿಡದೆ
ಅರೆದು ಅರೆದು ಸ್ಫುಟತೆಪಡೆದು,
ಪರಿಪೂರ್ಣರಾದ ಜೋಡಿ ನಮಗೆ
ಇನ್ನೆಷ್ಟು ಕಾಲ ಈ ಪರೀಕ್ಷ,
ಎಂದೆಂದಿಗೂ ಒಂದಾಗುವ.

Tuesday, April 26, 2016
Topic(s) of this poem: love
COMMENTS OF THE POEM
READ THIS POEM IN OTHER LANGUAGES
Close
Error Success