ದೂರ ನೀನಿರುವಾಗ Poem by Praveen Kumar in Divya Belaku

ದೂರ ನೀನಿರುವಾಗ

ದೂರ ನೀನಿರುವಾಗ, ಹಾರಿ, ನಿನ್ನ ಸೇರಬೇಕೆನ್ನವಾಸೆ,
ಹಾರಿ, ಹಾರಿ, ಬಂದು, ಹಿಡಿದು, ನಿನ್ನ ಬಿಗಿದಪ್ಪುವಾಸೆ;
ಬಾುತುಂಬ ನುಡಿದು, ಹೃದಯದಾಸೆ ಹೊರ ಹರಿಸುವಾಸೆ;
ನೀ ಬಂದಾಗ ಬಳಿಗೆ, ತಿಳಿಯದಾತುರ, ಮುಜುಗರ, ಮಹಾಪೂರ ಒಳಗೆ,
ಸಂಕೋಚ, ದಿಗಿಲು, ಮೈಯೆಲ್ಲ ಬೆವರಿ, ಪುಕುಲುತನದ ಬಯಲು;
ಸುಡುವ ಬೆಂಕಿಯ ದಾಹ, ಜೀವಂತ ಸುಡುವಾಗ ಒಳಗೆ,
ಕೈ ಮೀರಿದ ಚಳಿಯಲ್ಲಿ, ಮೈ ಮರಗಟ್ಟುವ ಭಯ ಹೊರಗೆ.

ಮರೆಯಾದಾಗ ನಿನ್ನ ಮುಖ, ನನ್ನ ಚಿತ್ತದಲ್ಲೆಲ್ಲ, ನಿನ್ನದೇ ಚಿತ್ರ,
ವಿವಿಧ ಭಾವ ಭಂಗಿ, ರೂಪರೇಖೆ, ಹಾವ ಭಾವ ವೈವಿದ್ಯ,
ನನ್ನನಾವರಿಸಿ, ನುಡಿಸಿ, ನೀನೆ ನಾನು, ನಾನು ನೀನಾಗಿ, ನನ್ನೊಳಗೆ ನಗುವೆ;
ಬಂದೆಯೋ ಬಳಿಗೆ, ಏನೋ ಭಯ, ಪುಳಕ, ಹಿಂದೆ ಸರಿಯುವ ಭಾವ,
ತಲೆಯೆತ್ತಿ, ನಿನ್ನ ಕಣ್ಣಿನ ಬೆಳಕ ಕುಡಿಯಲಾರದ ಜೀವ;
ಒಳಗೆ ಆಸೆಗಳ ಧಾರೆ, ಹೊರಗೆ ಕೈಲಾಗದ ಅಸಹಾಯಕ ನೋವು,
ಇದು, ನಮ್ಮ ಪ್ರೀತಿ, ಭಾವಗಳ ನಿಧಾನಗತಿ ಸಾವೋ ಏನೋ.

ನಿನ್ನ ಬಳೆ, ಗೆಜ್ಜೆ, ಝಣಕಾರ, ಕಿವಿಯಲ್ಲಿ ಝಣಝಣಿಸದಿರಲು,
ಏನೋ ಕಳೆÀದಂತಹ ನೋವು, ಒಳಗೇನೋ ಖಾಲಿ, ತಾಳತಪ್ಪಿದಾತಂಕ;
ನೀನಿಲ್ಲದಿರುವಾಗ, ಜೀವನವೆ ಭಣ ಭಣ, ರೌರವ ಮೌನ;
ಜೀವ ಚಿಗುರುವ ಪರಿಮಳವಾಗಿ, ನೀನೆನ್ನ ಬಳಿ ಬರುವಾಗ,
ಬಂದೆನ್ನ ಸುತ್ತಿ, ಸುತ್ತಿ, ಬಳಸಿ ಹಿಡಿದು, ಮೈಮನ ತುಂಬುವಾಗ,
ಅದೇನೋ ಚಂದ, ಆನಂದ, ಹೆಮ್ಮ, ಕೃತಕೃತಾರ್ಥ ಭಾವ,
ಮೋಡಗಳನೇರಿ ನಿಂತು, ಸ್ವರ್ಗಕ್ಕೆ ಕಿಚ್ಚಿಡುವ ಭಾವ.

Tuesday, April 26, 2016
Topic(s) of this poem: love
COMMENTS OF THE POEM
READ THIS POEM IN OTHER LANGUAGES
Close
Error Success