ತೃಪ್ತಿ ಜೇನು Poem by Praveen Kumar in Divya Belaku

ತೃಪ್ತಿ ಜೇನು

ಇದ್ದಾಗ ಕೊಡಬೇಕೆಂದಾಗ
ಬರಲಿಲ್ಲ ನೀನು,
ಬಂದು ನೀನು ಕಾದುನಿಂತಾಗ
ಉಳಿದಿಲ್ಲ ನನ್ನಲ್ಲೇನೂ.

ನಿನಗೆ ಕೊಡಬೇಕೆಂದೆಂದೇ
ದಿಗಂತದಾಚೆಯೂ ಕೈಚಾಚಿ
ಇದ್ದುದನೆಲ್ಲಾ ಬಾಚಿಕೊಂಡೆ,
ಬಾಚಿದುದನೆಲ್ಲಾ ಕೂಡಿಟ್ಟುಕೊಂಡೆ.

ಆದರೆ ನೀನು ಬರಲಿಲ್ಲ,
ನನ್ನಾಶೆ ಕುಡಿ ಅರಳಲಿಲ್ಲ;
ಕಾದು ಕಾದು ಕೊರಗಿ ಸೊರಗಿ
ಕೊನೆಗೆ ಕೈಚೆಲ್ಲಿ ಕೂತೆ.

ಕೂಡಿಟ್ಟದ್ದೆಲ್ಲ ಕರಗಿದಾಗ,
ಕಾಲಚಕ್ರದಡಿ ನುಚ್ಚುನೂರಾದಾಗ,
ಇನ್ನೇನು ನಾನು ಕೊನೆಕಾಯುವಾಗ
ಎಲ್ಲಿಂದಲೋ ನೀನು ಮೂಡಿಬಂದೆ.

ಕೊಡಬೇಕು ನಾನು ಎಲ್ಲ,
ಆದರೆ ನಿನಗೆ ಬೇಕಾದದ್ದು ನನ್ನಲ್ಲೆ ಇಲ್ಲ;
ಹೇಗಿನ್ನಾದರಿಸಲಿ ನಿನ್ನ,
ಬಯಲಾಗಿ ನಿಂತೆನಲ್ಲ.

ಇರುವುದನೆಲ್ಲ ಕೊಡಬೇಕೆಂದಾಸೆ,
ನಿನಗಾಗಿ ಮುಡಿಪಾಗಿಡುವಾಸೆ;
ಕೊಟ್ಟದ್ದು ಕೊರಳಿಗೆ ಹೊರೆಯಾಗುವಾಗ
ಕೊಟ್ಟು ನಿನ್ನನ್ನು ಪೀಡಿಸಲೇಕೆ?

ನೀನು ಬಂದಾಗ, ಆಸೆ ತಂದಾಗ,
ಕಂಡೂ ಕಾಣದವನಂತೆ,
ಕೇಳಿಯೂ ಕೇಳದವನಂತೆ
ಇರುವುದೆ ನನಗುಳಿದ ಮಾರ್ಗ.
ಇದ್ದ ಆಶೆಗಳ ಬಚ್ಚಿಟ್ಟು,
ಭಾವಭಾವನೆಗಳ ಕೈಯಾರೆ ಸುಟ್ಟು,
ನಿನ್ನೆದುರು ನಿರ್ವರ್ಣನಾಗುವುದಕ್ಕಿಂತ
ಭೂಮಿ ಬಿರಿದೆನ್ನ ನುಂಗುವುದೆ ಲೇಸು.

ಕಾಲದ ತಾಳತಪ್ಪಿ ನೀ ಬಂದೆ,
ಕೊಡಲೇನಿಲ್ಲವೆಂದು ನಾನು ನೊಂದೆ;
ನನ್ನದೆಲ್ಲದರಲ್ಲಿ ನಿನ್ನದೇ ಪಾಲು,
ನಿನಗೆ ಕೊಡಲಾಗದ್ದೇ ನನ್ನ ಸೋಲು.

ವಿಧಿವ್ಯೂಹದ ಮಧ್ಯೆ ಕಂಗಾಲಾದ ನಾನು
ಹೊರಬಂದು ನಿನ್ನ ಸುಧಾರಿಸಲೆ ಬೇಕು;
ಸಾಧ್ಯಸಾಧ್ಯತೆಯ ನಿರ್ಣಯ ಇದಲ್ಲ,
ನಿನ್ನಗತ್ಯಗಳೆ ನನ್ನ ದಾರಿದಿಕ್ಕು.

ಇರಲಿ ಇಲ್ಲದಿರಲಿ ಇಲ್ಲಿ,
ನನ್ನನ್ನೆ ನಿನಗಿಡುವೆ ನೋಡು;
ಬೇಕಿರಲಿ, ಬೇಡವಾಗಿರಲಿ,
ಬಂದ ಕಾರಣಕೆ ಸ್ವೀಕರಿಸು ಎಲ್ಲ.

ಬಂದವಳು ನಿನ್ನ ಬರಿಗೈಯಲ್ಲಿ
ನಾನು ನೋಡುವಂತಿಲ್ಲ;
ಬಂದ ಕಾರಣಕೆ ನನ್ನ ಸ್ವೀಕರಿಸಿ
ಮನದೊಳಗಿನ ನೋವನಿಳಿಸು ಬೇಗ.

ಕಾಲದೇರಿಳಿತಗಳಂತಿರಲಿ,
ಅಗತ್ಯನಗತ್ಯಗಳೆಂತಿರಲಿ,
ನೀ ಬಂದು ನಾವೊಂದಾದಮೇಲೆ
ಒಟ್ಟಾಗಿ ಒಂದಾಗಿ ಮನೆ ಸೇರಬೇಕು.

ಇಂದಲ್ಲವಾದರೆ ನಾಳೆ
ನೀನೆನ್ನಲ್ಲಿ ಬರಲೆ ಬೇಕಿತ್ತು,
ಇರಲಿ ಏನಿಲ್ಲದಿರಲಿ
ನಿನಗೆ ನನ್ನದನೆಲ್ಲ ಕೊಡಲೆಬೇಕಿತ್ತು.

ನಾವೊಂದೆ ಕಿಡಿಯ ಹೋಳುಗಳು,
ಬೇರ್ಪಟ್ಟೊಂದಾಗುವುದು ವಿಧಿಯ ನಿಯಮ;
ಒಳಗೆ ಹೊರಗೆ ಹೇಗಿರಲಿ ನಾವು,
ಸುಸಂಧಿಯಲಿ ನಿಷರತ್ತಾಗಿ ಸೇರಲೇ ಬೇಕು.
ಈಗ ಬಂದೆನೆಂದು ಕಾದು ನಿಂತಾಗ
ನನ್ನಲ್ಲೇನೂ ಉಳಿದಿಲ್ಲವೆಂದು ಹೇಳಲಿ ಹೇಗೆ?
ಇದ್ದಾಗ ಕೊಡಬೇಕೆಂದಾಗ ಬರಲಿಲ್ಲವೆಂದು
ಕೊರಗಿ ಸೊರಗಿ ಕೈಚೆಲ್ಲಿ ನಿಲ್ಲಲಿ ಹೇಗೆ?

ಯಾವಾಗ ಬೇಕೆಂದಾಗ ಬಾ ನೀನು,
ನಿನ್ನ ಸ್ವಾಗತಕೆ ಸದಾ ಸಿಧ್ಧ ನಾನು;
ಇದ್ದುದನ್ನೆ ಹಂಚಿ ನೀನು ನಾನು
ಅನ್ಯೋನತೆಯಲ್ಲಿ ಕಾಣುವ ತೃಪ್ತಿಜೇನು.

Tuesday, April 26, 2016
Topic(s) of this poem: love
COMMENTS OF THE POEM
READ THIS POEM IN OTHER LANGUAGES
Close
Error Success