ನೀನಿನ್ನು ಹೋಗಬೇಡ ದೂರ
ಕಡಿದೆನ್ನ ಮನಸಿನ ದಾರ,
ನೀ ಹೀಗೆ ತೊರೆದರೆ ಊರ
ನನಗಿನ್ನಾರು ಹಿತ ಆಧಾರ?
ಬರಬೇಕೆಂದು ನೀ ಹೋದ ದೂರ
ನನ್ನ ಕಣ್ಣಿಗೆ ಬಡಿದಿದೆ ಭಾರ,
ಇನ್ನು ಕಣ್ಣಲ್ಲಿ ಕಣ್ಣಿಟ್ಟು ಯಾರ
ಕೊರಳಲ್ಲಿಡುವೆ ನಾ ಮುತ್ತಿನ ಹಾರ?
ನಿನ್ನ ಹುಡುಕುತ ನಾ ಬಂದಾಗ,
ನನ್ನ ನೀ ಹಿಂದೆ ಕಳುಹಿಸಿ ಬೇಗ
ತುಂಬಿದ ಕಣ್ಣ ಸೆರಗಲ್ಲೊರಸಿ
ನಸುನಕ್ಕಿದ್ದೆ ನೋವನು ಮರೆಸಿ.
ಕಲ್ಲುಮುಳ್ಳಿನ ದಾರಿ ಇದೇಕೆ?
ಜೊತೆ ನಡೆಯುವ ಹಂಬಲ ಸಾಕೆ?
ನೀನಿಲ್ಲದ ಸುಖ ನೆರಳೇಕೆ?
ಬೆಳಕಿಲ್ಲದ ದೀಪವು ಬೇಕೆ?
ಮೊಳೆಗಳ ರಾಶಿಯ ಒಳಗೆ
ಕೈಯನಿಕ್ಕಿ ಸೂಜಿಕಲ್ಲಿನ ಹಾಗೆ
ನನ್ನ ಗುರುತಿಸಿ ಬಳಿ ಸೆಳೆದಿದ್ದೆ.
ನಿನ್ನ ಸೆಳೆತದಲ್ಲಡಗಿಸಿ ಹಿಡಿದಿದ್ದೆ.
ಹೃದಯಕೊಪ್ಪಿಸಿ ನಿನ್ನಯ ಹೃದಯ
ನೀ ಮಾಡಿದೆ ಪ್ರೀತಿಯ ಉದಯ,
ನಿನ್ನ ನಸುನಗು ಕಣ್ಣು, ಆ ವಿನಯ
ಮೋಡಿಗೊಳಿಸಿತು ನನ್ನಯ ಹೃದಯ.
ನಿನ್ನ, ಸೆರಗಿನ ಹೊದಿಕೆಯ ಸ್ಪರ್ಷ,
ನಿನ್ನಾ ಕೂದಲ ಸೆಲೆಗಳ ಸೆಳೆತ
ನನ್ನ ಬಂಧಿಸಿ ಉಣಿಸಿತು ಹರ್ಷ,
ತಂದಿತುಲ್ಲಾಸದ ಮೋಹಕ ವರ್ಷ.
ಅಂದು ಮುಳ್ಳಿನ ನೋವನು ತಡೆದು
ಕೆಂಪು ಕೆಂಡದ ಮೇಲೆ ನಡೆದು,
ಓಡಿ, ನೀನೋಡಿ ತಬ್ಬಿದೆ ನನ್ನ,
ಇಂದೇಕೆ ಮೌನ, ವಿವರ್ಣ?
ನಿನ್ನ ನಿರೀಕ್ಷೆಯ ಎತ್ತರ ಬರದೆ
ನಾ ನಿರಾಶೆಯ ತಂದೆನು ಎಂದೆ?
ಕಾಲ ಕುದುರೆಯ ಬೆನ್ನಿನ ಮೇಲೆ
ನೀ ನಾಗಾಲೋಟದಿ ಜಾರುವೆ ನಲ್ಲೆ.
ನಿನ್ನ ಕಣ್ಣಿನ ಕಾಂತಿಯ ಬದಲು
ಕಪ್ಪು ಕಂಬನಿ ತುಂಬಿದೆ ಇಂದು,
ಆ ನಲ್ಮೆಯ ನಸುನಗೆ ಬೆಳಕು
ಕಂದಿದೆ ಮುಖದಲಿ ಇಂದು.
ಉಲ್ಲಾಸದ ಸಾಗರ ಅಂದು,
ಬತ್ತಿದೆ, ಬಳಲಿದೆ ಇಂದು,
ನೋವಿನ ಮೋಡದ ಪದರು
ಈಗ ನಿಂತಿದೆ ನಮ್ಮ ಎದುರು.
This poem has not been translated into any other language yet.
I would like to translate this poem