ಹುಣ್ಣಿಮೆಯೆ ಹೆಣ್ಣಾಗಿ, ಬಣ್ಣಬಡೆದು ಬಂದಳೊ,
ಹಾಲುಗಿಣ್ಣು ಜೇನಲ್ಲಿ, ಮೈತಾಳಿ ಬಂದಳೊ;
ಈ ಹೆಣ್ಣು, ರೂಪಸಿ ಹೃದಯಾರ್ದೃಗೊಳಿಸುವ ಸರಸಿ,
ಮೈಮನ ಮುದಗೊಳಿಸುವ ಚೆಲುವಿನ ಪಟ್ಟದರಸಿ.
ಇವಳು, ಅಂತಿಂತವಳಲ್ಲ, ಚೇತನದ ಬುಗ್ಗೆ,
ಮೋಹಕತೆಯ ಗ್ರಂಥಿ, ವಿಸ್ಮಯದ ಕಂತೆ;
ಮೆಲ್ಲ, ಮೆಲ್ಲಗೆ, ತೀಡುವ ದುಂಡುಮಲ್ಲಿಗೆಯ ಮೊಗ್ಗೆ,
ಅದ್ಯಾತ್ಮ ಸಂಗೀತ, ಸುರಸೌರಭದ ಒರತೆ.
ಒಳಗಿದ್ದರೆ, ವೀಣೆಯ ಸ್ವರವಾಗಿ ಹೊರಹಬ್ಬುವಳು,
ಹೊರಗಿದ್ದರೆ, ಪ್ರೀತಿಯ ಒರತೆಯಾಗಿ ಒಳ ಸ್ಫುರಿಸುವಳು;
ಇವಳು ದೂರದೆಲ್ಲಿಂದಲೋ ಬಳಿ ಬಂದವಳಲ್ಲ,
ಒಳಗಿಂದ ಹೊರಹಬ್ಬಿ, ಮತ್ತೆ, ಮೈಮನವಾವರಿಸುವ ಚೆಲುವು.
ರೂಪದಲೋ, ಚೆಲುವಿನ ಹಿತ ನಂದಾದೀಪ ಇವಳು,
ನಡೆನುಡಿಯಲ್ಲೋ, ಮುಂಜಾವಿನ ಚೈತನ್ಯದ ಚಿಲುಮೆ,
ಶುದ್ಧ, ಪರಿಶುದ್ಧ, ಶುಭ್ರ ಮಂಜಾನೆ ಮಂಜುವಿನಂತೆ;
ಆತ್ಮಕ್ಕೆ ಹಿತ, ಅವಳು, ದಿವ್ಯ ಪನ್ನೀರು, ಗಂಧ, ಆನಂದ.
ವೈಶಾಖದ, ಮೊದಲ ಮಳೆಯ ಸವಿಸೌಗಂಧದಂತೆ,
ಒಳಗೊಳಗೆ ಮುದಕೊಡುವ, ಹಿತ ಅಲೌಕಿಕತೆ ಅವಳು;
ಪ್ರೀತಿ ಪ್ರಾತ: ಕಾಲದ, ಕಣ್ಣಿನ ಹೊಳಪಿನ ಕಿರಣಗಳಂತೆ,
ಮೈಮುಟ್ಟಿ ತಡವಿ, ಪ್ರಸರಿಸುವ, ಹಿತ ಬೆಳಕಿನ ಹೊಳೆ ಅವಳು.
ಇಂದು ನಿನ್ನೆಗೆ ಮೀರಿ, ಕಾಲವರ್ತುಲದಾಟಿ,
ಹರಿವ ಸಾತ್ವಿಕ ಧಾರೆ, ಈ ಮನಮೋಹಿನಿ, ರಾಣಿ,
ಹಲವು ದಡಗಳದಾಟಿ, ವಿರಾಗಗಳ ಮೈಮನ ಮುಟ್ಟಿ,
ಹಸಿರು ಚಿಗುರಿಸುವ, ಪ್ರಿಯ ಚೈತ್ರ ತಪಸ್ವಿನಿ ಅವಳು.
This poem has not been translated into any other language yet.
I would like to translate this poem