ಕಾಲಗರ್ಭವನೊಡೆದು,
ಸಪ್ತಸಾಗರಗಳ ಕಡೆದು,
ಅಂತರಕ್ಷದಿಂದ ಜಿಗಿದು,
ಕತ್ತಲೆಯ ಪರೆಯನ್ನು ಬಗೆದು,
ಬಾರೆ ಬಳಿಗೆ ನನ್ನ ಮನದನ್ನೆ.
ಅರುಣೋದಯದ ಕಿರಣಗಳನೇರಿ,
ಕಾಮನ ಬಿಲ್ಲುಗಳ ಸಂಧಿಗಳ ತೂರಿ,
ಪ್ರೀತಿ ಪ್ರಾಂಜಲತೆಯ ತಂಗಾಳಿಯ ಹೇರಿ,
ಹುಣ್ಣಿಮೆಯ ಚಂದ್ರಮನ ಮಾರ್ದವತೆ ತೋರಿ,
ಬೆಳಕಾಗಿ ಬಾರೆ, ಹಿತವಾಗಿ ಬಾ.
ಹಕ್ಕಿಗಳ ರೆಕ್ಕೇಗಳನೇರಿ ಬಾ,
ಮಲ್ಲಿಗೆಯ ಸೌಗಂಧವಾಗಿ ಬಾ,
ಅಷ್ಟದಿಕ್ಕುಗಳ ಹಬ್ಬಿ ತಬ್ಬಿ ಬಾ,
ಅದಮ್ಯೊತ್ಸಾಹದ ಬುಗ್ಗೆಯಾಗಿ ಬಾ,
ಹೇಗಾದರೂ ನನ್ನ ಬಳಿ ಬಂದೆ ಬಾ.
ನಿನ್ನ ಸ್ವಾಗತಕ್ಕೆಂದು,
ಪ್ರತೀಕ್ಷೆಯ ತೋರಣಕಟ್ಟಿ,
ಹೃದಯ ಸಿಂಹಾಸನವಿಟ್ಟು,
ಪಂಚೇಂದ್ರಿಯಗಳ ಸೇವೆಗಿಟ್ಟು,
ಯುಗಯುಗಾಂತರದಿ ಕಾದಿರುವೆ ನಿನ್ನ.
ಬೆಳಕು ಜಾರುವ ಮುನ್ನ,
ಸಂಜೆಯ ಬಸವಳಿದ ಬಣ್ಣ,
ಮೈಮನ ಥಂಡಗೊಳಸುವ ಮುನ್ನ,
ಚೈತನ್ಯದೇರು ಉಡುಗುವ ಮುನ್ನ,
ಬಂದೆನಗೆ, ಹೊಸಜೀವದ ಹುರುಪನ್ನು ನೀಡೆ.
ಸಪ್ತಸ್ವರವೆಂಬಶ್ವಗಳೆಳೆಯುವ,
ಸಂಗೀತ ಲಹರಿಯ ತೇರನ್ನೇರಿ,
ಮೈಮನಕೆ ಹಿತ ಕುಚುಕುಳಿುಡುವ,
ರಸಿಕತೆಯ ಚಮತ್ಕಾರವಾಗಿ,
ನನ್ನ ಚೇತನವನರಳಿಸಲು ಬಾರೆ.
ನಗುನಗುತ, ಕುಣಿಕುಣಿದು ಬಾ,
ಶುಭ್ರ ಬೆಳಕಿನ ನಿರಭ್ರತೆಯಾಗಿ,
ಹೊಚ್ಚಹೊಸ ಬೆಳಕನ್ನು ಚೆಲ್ಲುತ್ತ ಬಾ;
ಹೊಸ ಕನಸುಗಳ ಅವಿಷ್ಕಾರವಾಗಿ,
ಹೊಸ ಆಶೆ, ಆಕಾಂಕ್ಷೆಗಳ ಹೊತ್ತು ಬಾ.
ನಿನ್ನ ಬರುವಿಕೆುಂದ,
ಲೋಕಕ್ಕೆ ಹಿಂದಿರದ ಅಂದ ಚಂದ;
ನಿನ್ನೊಲವಿನ ಸಡಗರದಿಂದ,
ಬದುಕು ಬಂಗಾರ, ಮಹದಾನಂದ;
ಈ ವರಪ್ರಸಾದ ಹೊತ್ತು ಹಾರಿ ಹಾರಿ ಬಾ.
ನೀನೊಂದುದಿನ ಬಂದೆ ಬರುವಿಯೆಂದು,
ಅನಿರ್ಧಿಷ್ಟವಾಗಿ ನಾನು ಕಾಯುವಂತಿಲ್ಲ;
ಕಾತರದಿ ನಿನ್ನಾಗಮನಕ್ಕೆಂದು,
ದಿನರಾತ್ರಿ ಯುಗಯುಗ ಹೀಗೆ ಇರುವಂತೂ ಇಲ್ಲ;
ಸ್ಥಿತಿಯರಿತು, ನೀನು ಬೇಗ ಬರುವುದೆ ಲೇಸು.
ನನ್ನ ನಿನ್ನ ಹಂಬಲದ ಸಮಾಗಮವು,
ಧ್ರುವಗಳೊಂದೊಂದ ಬೆರೆಯುವಂತೆ,
ಪರಿಪೂರ್ಣತೆಯ ಪುಣ್ಯ ಅವತೀರ್ಣದಂತೆ,
ಕಾಲನೇಮದೀ ಅಪೂರ್ವಸಿದ್ಧಿಗಾಗಿ,
ತಡಮಾಡದೆ, ಬೇಗ ಹಾರಿ ಬಾರೆ.
This poem has not been translated into any other language yet.
I would like to translate this poem