ಮೈತ್ರಿ ಸ್ನೇಹದ ಸುಂದರ ಮಿಂಚಿನ ಬಳ್ಳಿ Poem by PRAVEEN KUMAR Kannada Songs

ಮೈತ್ರಿ ಸ್ನೇಹದ ಸುಂದರ ಮಿಂಚಿನ ಬಳ್ಳಿ

ಅನುರಾಗ, ಅಕ್ಕರೆಗಳ, ಸಾವಿರ ಕಾರಂಜಿ ಹೊತ್ತವಳು,
ಲಕ್ಷ್ಯಗಮನಗಳ ಪೂರ್ಣ ಕಾಯಕವೆ ಅವಳು;
ತಾನು, ತನದೆಂಬ, ಅಹಂಭಾವಗಳನೆಂದೋ ಮರೆತವಳು,
ಯಾವ ಚುಂಬಕದ ಬಲವೋ, ನನ್ನೆದುರೆದುರು ಸುಳಿಯುವಳು.

ಹಂಗು, ಸಂಬಂಧದ ಬಂಧದಲಿ ಕಟ್ಟುಬಿದ್ದವಳಲ್ಲ,
ಯಾವ ಆಶೆ, ಆಕಾಂಕ್ಷೆಗಳ, ನನ್ನೆದುರು ತಂದವಳಲ್ಲ;
ಆದರೂ, ಅದೇನೋ, ಮೈತ್ರಿಸ್ನೇಹದ ಸುಂದರ ಮಿಂಚಿನ ಬಳ್ಳಿ,
ಅದೆಲ್ಲಿಂದಲೋ ಬಂದಿಳಿದು, ಕಟ್ಟುತ್ತಿದೆ ನನ್ನನವಳನ್ನ.

ನಾನೆಂದು ಬರುವೆನೆಂದು, ನನಗಾಗಿ ಕಾಯುವಳು,
ಬಂದಾಗ, ಮೊಗ್ಗು ಅರಳುವಂತೆ, ಮನಸ್ಸೆಲ್ಲ ತುಂಬುವಳು;
ಉತ್ಸಾಹದುಬ್ಬರಲ್ಲಿ, ನಗುನಗುತ ಓಡಾಡುವಳು,
ನನ್ನ ಪರಿಧಿಯ ರೀತಿ, ಸುತ್ತು ಸುತ್ತು ಸುತ್ತುವಳು.

ನಾನೆದುರು ಇರುವಾಗ, ಬೇರೆಲ್ಲವುಗಳ ಮರೆತು,
ತನ್ನೊಳಗಿನ ಭಾವಗಳಿಗೆ, ತುಂಬುವಳು ಜೀವ;
ಅದೇನೋ, ಕಣ್ಣಲ್ಲಿ ಹೊಳಪು, ಅದೇನೋ, ಕಣ್ಣಲ್ಲಿ ಬೆಳಕು,
ಅದೇನು ಹಾವಭಾವ, ಮಂದಹಾಸ, ಸುಂದರ ಜಾಲ!

ಮುಂದೆ ನುಗ್ಗಿ, ಸೆಟೆದು, ತನ್ನ ಭಾರ ತೋರುವವಳಲ್ಲ,
ತಗ್ಗಿ, ಬಗ್ಗಿ, ಬಳಿ ಸುಳಿದು, ಮನ ಸೆರೆ ಹಿಡಿಯುವವಳು;
ಉಪೇಕ್ಷೆುಂದ, ನಿರಪೇಕ್ಷೆ ಹಬ್ಬುವವಳಲ್ಲ,
ಲವಲವಿಕೆುಂದ, ಹೃದಯ ತುಂಬುವ ಮಿಂಚು ಅವಳು.

ಮೆಲ್ಲಮೆಲ್ಲನೆ ಒಳ ಹರಿದು, ಹಬ್ಬಿ ಹರಿಯುವ ಅವಳು,
ಗಂಗೆಯಂತೆ ಪರಿಶುದ್ಧೆ, ಪ್ರಶಾಂತೆ, ಮಂದಗಮನೆ;
ಒಳಗಿನ ಕಲ್ಮಶಗಳ ಹೊರದಬ್ಬಿ, ಮಹದಾನಂದ ತರುವ ಅವಳು,
ನನ್ನಂತರಾಳದ ಶಕ್ತಿ, ದೇವತೆ, ನನ್ನ ಬೆಳಕು.

Tuesday, April 26, 2016
Topic(s) of this poem: love
COMMENTS OF THE POEM
READ THIS POEM IN OTHER LANGUAGES
Close
Error Success