ಯಾಕೆ ಹೀಗೆ? Poem by PRAVEEN KUMAR Kannada Songs

ಯಾಕೆ ಹೀಗೆ?

ಬೇಕು ಬೇಕೆಂದು ಬಳಿ ಬಂದಾಗ ನಾನು
ಬೇಡ ಬೇಡೆಂದು ದೂರ ಸರಿದವಳು ನೀನು;
ಕೈ ಚಾಚಿದರೆ, ದೂರ ದಿಗಂತದಾಚೆಗೆ ಸಿಡಿದು,
ಕಣ್ಣಿಗೆ ಕಪ್ಪು ಕತ್ತಲೆ ತಂದವಳು ನೀನು.

ನಿನ್ನೊಳಗು ಹೊರಗು ಸ್ವತಹ ಕಂಡವನು ನಾನು,
ನಿನ್ನಾಂತರ್ಯ ಸ್ಫ್ಫುರತೆಯಲೆ ಸ್ಫುಠಗೊಂಡವನು;
ನೀನೆಲ್ಲೋ ಮರೆಯಾಗಿ, ಕತ್ತಲೆ ಜೀವ ಹಿಂಡಿದರೇನು,
ನನ್ನಾಳದ ದೀಪ ನಿನ್ನೆಡೆಗೆ ಮುನ್ನಡೆಸುತ್ತಿದೆ ಇನ್ನೂ.

ಬೇಡ ಬೇಡೆಂಬ ನೀನು, ಬೇಕು ಬೇಕೆಂಬ ಬಲೆಯಲ್ಲಿ
ಸಿಕ್ಕಿ ಸಿಕ್ಕಿ ತೊನೆದು, ಬೇಡೆಂಬ ಬೆಂಕಿಗೆ ಮೈಕೊಟ್ಟು,
ನಿನ್ನಾಶೆಯನು ಹರಿದು, ಬಹು ದೂರ ಸಿಡಿದು ಬಿಟ್ಟೆ,
ಕಪ್ಪು ಕತ್ತಲೆ ಲೋಕಕ್ಕೆ ಎದೆ ಹರಿದು ಹೊಕ್ಕಿಬಿಟ್ಟೆ.

ನಿನ್ನ ಬಲೆಯನು ಹರಿದು, ಮುರಿದು, ನಿನ್ನ ಬೆಳಕಾಗಲೆಂದು,
ದೀಪದ ಬತ್ತಿಯಾಗಿ ನಾನು ಮತ್ತೆ ಮತ್ತೆ ನನ್ನ ಸುಟ್ಟುಕೊಂಡೆ;
ಅಯ್ಯೋ, ನೀನೋ, ಮತ್ತೆ ಮತ್ತೆ ಹಿಂದೆ ಹರಿದು, ಎದೆಕೊಟ್ಟು,
ನಾ ಕೊಟ್ಟ ದೀಪ ಬೆಳಕನ್ನು ನಿಷ್ಕರುಣೆಯಿಂದ ನಂದಿಸಿಬಿಟ್ಟೆ.

ಚಕ್ರವ್ಯೂಹದ ಮಧ್ಯೆ ನಿನ್ನ ಚಡಪಡಿಕೆಯಾಳ ಬಲ್ಲ ನಾನು
ನಿನ್ನುರುಗೋಲಾಗಿ ಬಿಡುಗಡೆ ತರಲು ಸದಾ ಸಿಧ್ಧನಿದ್ದೆ;
ನೀನಾದರೋ ನನ್ನ ಹಿತಕ್ಕೆಂದು ನಿನ್ನೆಲ್ಲ ತೊರೆದು ಬಿಟ್ಟೆ,
ಕತ್ತಲೆಯ ಗರ್ಭಕ್ಕೆ, ಸುಡು ಬೆಂಕಿಯಾಳಕ್ಕೆ ಹಾರಿಬಿಟ್ಟೆ.

ಹೆಣ್ಣು ತ್ಯಾಗದ ಕಣ್ಣು, ನಿಸ್ವಾರ್ಥತೆಯ ಅರ್ಥ, ಮಂತ್ರ, ಸತ್ಯ,
ಆದರೆ ಇಲ್ಲಿ ತ್ಯಾಗ ನಿಸ್ವಾರ್ಥತೆಯೊ ಇಬ್ಬಗೆಯ ಅಲಗು;
ನಿನ್ನನ್ನು ನೀನು ಸುಟ್ಟುಕೊಂಡೆ, ಕತ್ತಲಲ್ಲಿ ನನ್ನನ್ನುಳಿಸಿ ಬಿಟ್ಟೆ,
ಮತ್ತೆ ಚಿಗುರದ ಹಾಗೆ ಬಾಳ ಬಳ್ಳಿಯ ಬೇರು ಕಿತ್ತುಬಿಟ್ಟೆ.

ಕೂಡಿ ಹುಡುಕ್ಕಿದ್ದರೆ ನಾವು ಸಾವಿರ ದಾರಿ ಕಾಣಬಹುದಿತ್ತು,
ನೀನು ನಿನ್ನಾಂತರ್ಯ ಬಿಚ್ಚಿ ನನಗೆ ತಿಳಿ ಹೇಳಬಹುದಿತ್ತು;
ನೀನು ದೂರ ದೂರ ನಿಂತು, ಹಾರಿ, ನನ್ನ ಕೈಬಾು ಕಟ್ಟಿಬಿಟ್ಟೆ,
ನಾನೆ ಬಳಿ ಸರಿದಾಗ, ಸಿಡಿದು, ಹರಿದು, ದೂರ ನೂಕಿಬಿಟ್ಟೆ.

ಚಂಚಲೆ ಹೆಣ್ಣು, ಅವಳಾಂತರ್ಯ ತಿಳಿದವರಿಲ್ಲವೆನ್ನುವುದು ಸತ್ಯ,
ಆದರೆ ನೀನು ಚಂಚಲೆಯಲ್ಲ, ತಿಳಿಯದಾಂತರ್ಯ ನಿನ್ನದಲ್ಲ;
ನೇರ ನಡೆ ನುಡಿ, ಮನಸ್ಸು, ನಿನ್ನದು ನಿಷ್ಕಲ್ಮಶ ಶುಧ್ಧಸ್ಥಿತ್ವ,
ಮತ್ತೆ ಯಾಕೆ ದೂರಾಲೋಚನೆ ಮೆಟ್ಟಿ ದೂರ ಸರಿದುಬಿಟ್ಟೆ?

Wednesday, April 27, 2016
Topic(s) of this poem: love
COMMENTS OF THE POEM
READ THIS POEM IN OTHER LANGUAGES
Close
Error Success