ನೀನು ರಾಧೆ, ನಾನು ಕೃಷ್ಣ Poem by PRAVEEN KUMAR Kannada Songs

ನೀನು ರಾಧೆ, ನಾನು ಕೃಷ್ಣ

ನೀನು ರಾಧೆ, ನಾನು ಕೃಷ್ಣ, ನಮ್ಮ ಪ್ರೇಮ ಸುಂದರ -
ಆತ್ಮ ಆತ್ಮ ಕೂಡಿ ಹೆಣೆದ ಹೃದಯ ಹೂವಿನ ಹಂದರ;
ನೀನು ರಾಧೆ, ನಾನು ಕೃಷ್ಣ, ನಮ್ಮ ಬಂಧ ನಿರಂತರ -
ಆತ್ಮಜ್ಯೋತಿ ಮಿಂಚಿ ಕೊಟ್ಟ ಶೃಧ್ಧೆ ನಿಷ್ಠೆಯ ಮಂದಿರ.

ನಿನ್ನ ಪ್ರೇಮಾಮೃತದ ಧಾರೆ ನನ್ನ ಹೃದಯ ತಟ್ಟಿದಾಗ,
ನನ್ನ ಮುರಳಿ ನಾದದಿಂದ ನಿನಗೆ ಕರೆಯ ಕೊಟ್ಟ ಕ್ಷಣವೆ
ಎಲ್ಲ ಮರೆತು ಕುಣಿದು ನಲಿದು ಬಳಿಗೆ ಬರುವ ನಿನ್ನ ನಿಷ್ಠೆ
ರಾಧೆ ಕೃಷ್ಣ ಪ್ರೀತಿಯಲ್ಲಿ ಸಮರಸತೆಯ ಪ್ರತೀಕವು.

ರಾಧೆ ನೀನು ಬಳಿಗೆ ಬಂದು ನನಗೆ ಬೆಳಕು ಆಗಬೇಕು,
ನಾನು ನಿನಗೆ ತೈಲವಿಕ್ಕಿ ನಿನ್ನ ದೀಪ ಬೆಳಗಬೇಕು;
ನೀನು ನನ್ನ ಆತ್ಮ ದೀಪ, ಹೃದಯದೊಳಗಿನ ಚೇತನ,
ಹೃದಯ ಹೃದಯ ಕೊಂಡಿುಂದ ದಾರಿ ತೋರುವ ಸಾಧನ.

ಬಳ್ಳಿಯಂತೆ ನೀನು ಸುತ್ತಿ, ನನ್ನ ತುಂಬ ಹಬ್ಬಬೇಕು,
ನಾನು ನಿನಗೆ ಊರುಕೊಟ್ಟು, ಹುರುಪು ತ್ರಾಣ ತುಂಬಬೇಕು;
ನಿನ್ನ ನನ್ನ ಮಿಲನದಿಂದ ಊರಿಗೂರೆ ಕೆಂಪು ಕಟ್ಟಿ
ಲೋಕವೆಲ್ಲ ಚೈತ್ರಗೊಂಡು ಪ್ರೀತಿ ಮಂತ್ರ ಹಾಡಬೇಕು.

ಪ್ರಿಯ ನಿನ್ನ ವಿನಹ ನಾನು ವಿರಹದಿಂದ ಬೆಂದು ಬೆಂದು,
ನಂದಿಹೋದ ಬತ್ತಿಯಾಗಿ ಶೋಕದಲ್ಲಿ ಮಿಂದು ಮಿಂದು,
ನಿನ್ನ ಒಂದೆ ತಪಸಿನಲ್ಲಿ, ನಿನ್ನ ಧ್ಯಾನ ಕನಸಿನಲ್ಲಿ
ಕಸುವು ಮರೆತ ಬಾಳಿಗುಂಟ ಎಲ್ಲೋ ಹೇಗೋ ಹೋಗುವೆ.

ನೀನು ರಾಧೆ, ನಾನು ಕೃಷ್ಣ, ನಮ್ಮ ಬೆಸುಗೆ ಅಭೇದ್ಯವು,
ಅನ್ಯೋನ್ಯಕ್ಕಾಗಿ ಹುಟ್ಟಿ ಬಂದ ನಮ್ಮ ಪ್ರೀತಿ ಸುಸೂತ್ರವು;
ನೀನು ರಾಧೆ ನಾನು ಕೃಷ್ಣ, ಅರ್ಧ ಅರ್ಧ ಕೂಡಿ ಒಂದು;
ಅರ್ಧ ಅರ್ಧ ಸೇರಿದಲ್ಲಿ ಹೊಸತು ಜೀವ ಚಿಗುರ ಬೇಕು.

Wednesday, April 27, 2016
Topic(s) of this poem: love
COMMENTS OF THE POEM
READ THIS POEM IN OTHER LANGUAGES
Close
Error Success