ಒಳಗೆ ಹೊರಗೆ, ಅಲ್ಲಿ ಇಲ್ಲಿ, ಮೇಲೆ ಕೆಳಗೆ, ಸುತ್ತಲು,
ಎಲ್ಲೆಂದರಲ್ಲಿ ಇರುವೆ ನೀನು, ಹಿಗ್ಗಿ ಕುಗ್ಗಿ ಸುತ್ತ ಮುತ್ತಲು;
ದಿನದಿನವು, ದಿನದ ಕ್ಷಣಕ್ಷಣವು ನನ್ನನೆಚ್ಚರಗೊಳಿಸುತ
ನೆನಪಿನೇಣಿಯೇರಿ ಬರುವೆ, ನಿನ್ನಿರವನೆನಗೆ ತಿಳಿಸುತ.
ಕೈಯ ಚಾಚಿ ಹಿಡಿಯಬಂದರೆ ಗಾಳಿಗೋಪುರವಾಗುವೆ,
ನಿನ್ನನ್ನೊಳಗೆ ಹಿಡಿವೆನೆಂದರೆ, ಕರ್ಪೂರವಾಗಿ ಕರಗುವೆ;
ಗೊಡವೆಬೇಡವೆಂದು ಸರಿದರೆ, ನನ್ನ ಸುತ್ತಲೆ ಸುಳಿಯುವೆ,
ಮತ್ತೆ ಮತ್ತೆ ಕೆಣಕಿ ನನ್ನ ಸಿಹಿಮೋಡಿಯಲ್ಲಿ ಹಿಡಿಯುವೆ.
ಒಳಗೆ ಇರುವೆಯೋ, ಹೊರಗೆ ಇರುವೆಯೋ ತಿಳಿಯದು,
ಕಣ್ಣು ಕಿವಿಗಳು, ಘ್ರಾಣೇಂದಿಯ, ರುಚಿ ಸ್ಪರ್ಷಕೆ ಮೀರಿದ
ಬಾಷ್ಪರೂಪದ ಸರ್ವವ್ಯಾಪಿ ನಿನ್ನಿರವು ಅರಿವಿಗೆ ನಿಲುಕದು;
ನಿನ್ನಿರವು ಪ್ರಜ್ಞೆಯೊಂದೆ ಸಾಕ್ಷ್ಯಿ ನಮ್ಮ ಬಂಧಕೆ ಸರ್ವದ.
ನಿನ್ನ ನೋಡುವ, ನಿನ್ನ ಕೇಳುವ ಹಲವು ಹಂಬಲ ನನ್ನಲಿ,
ಎಲ್ಲಿ ತಿರುಗಲಿ, ಎಲ್ಲಿ ಹುಡುಕಲಿ ನಿನ್ನಿರವಿನ ನೆರಳನು?
ಸೋತು ಸೋತು ಮತ್ತೆ ನಾನು ಕೈಯ ಚೆಲ್ಲುವ ಕ್ಷಣದಲಿ
ನಾನಿಲ್ಲೆ ಇರುವೆನು ಎನುತ ನಗುತ ನನ್ನೊಳಗಿನಿಂದಲೆ ಅರಳುವೆ.
ಎಲ್ಲಿದ್ದರೂ, ನೀ ಹೇಗಿದ್ದರೂ, ನಾವಿಬ್ಬರೆಂದೆಂದೂ ಒಂದೆನೆ,
ನನ್ನಲ್ಲಿ ನೀನು, ನಿನ್ನಲ್ಲಿ ನಾನು, ನಮ್ಮಿಬ್ಬರಿರವಿನ ಲಾಂಛನ;
ಆಳ ತಿಳಿಯದ ಕ್ಷೀರಸಾಗರ, ಪ್ರೀತಿ ಹೊನಲು ತಿಳಿದಿರು,
ನೀನೊಳಗೆ ಇದ್ದರೂ, ನಿನ್ನ ನೋಡುವ ಬಯಕೆ ತುಂಬ ನನ್ನಲಿ.
ನಿನ್ನ ನೋಟವೊಂದೆ ಸಾಕು, ಜೀವ ಜೀವ ಕುಣಿಯಲು,
ನಿನ್ನ ಮಾತು ಕೇಳಿದಾಕ್ಷಣ ಸುಖದ ಸುಗ್ಗಿಯೆ ಮೊಳೆವುದು;
ನಿನ್ನ ಸ್ಫರ್ಷದಿಂದ ನನ್ನ ಸುಖದ ಕನಸು ಹಿಗ್ಗಿ ಹಬ್ಬಿ,
ದೈವತ್ವವೆಂಬ ಸ್ಥಿತಿಗೆ ನನ್ನ ಸದ್ವಿನಯದಿಂದ ತರುವುದು.
ಒಳಗೆ ಬೇಕು, ಹೊರಗೆ ಬೇಕು, ಒಳಗೆ ಹೊರಗೆ ಮೀರಿ ಬೇಕು,
ಕಾಲ ನಿಯಮದೊಳಗೆ ಬೇಕು, ಕಾಲ ಕರ್ಮ ಮೀರಿ ಬೇಕು -
ನನ್ನ ಜೀವದ ಸತ್ವವಾಗಿ, ನನ್ನಾತ್ಮದ ಅಂತರಾತ್ಮವಾಗಿ,
ಜನ್ಮ ಜನ್ಮದ ಸೇತುವಾಗಿ, ನನ್ನೊಡನೆ ನೀನು ಸಂವಹಿಸಬೇಕು.
ನಿನ್ನ ನನ್ನ ಪ್ರೀತಿ ಧಾರೆಯಲ್ಲಿ ಸ್ಠೃಮೂಲದ ಕಿಡಿ ಪ್ರಜ್ವಲತೆ
ಅಮೂರ್ತವಾಗಿ ಸ್ಫುರಣೆಗೊಂಡು ನಮ್ಮ ಮುಂದೆ ನಡೆಸುತ್ತಿದೆ;
ಇಳಿತವಿರಲಿ, ಭರತವಿರಲಿ, ಏರಿಳಿತವೊಂದು ಸ್ಠೃ ನಿಯಮ,
ದುಃಖ ಮರೆತು, ಎದೆಯ ಕೊಟ್ಟು, ಸಮಾಗಮಕೆ ಕಾಯುವ.
This poem has not been translated into any other language yet.
I would like to translate this poem