ಪರಿಪೂರ್ಣತೆ Poem by PRAVEEN KUMAR Kannada Songs

ಪರಿಪೂರ್ಣತೆ

ನೀನೊಬ್ಬಳಿದ್ದರೆ ಜೊತೆಯಲಿ, ಬ್ರಹ್ಮಾಂಡ ಮಂಡಲ ನನ್ನದು,
ನೀನಿಲ್ಲವಾದರೆ ಶೂನ್ಯವೆಲ್ಲ, ನನಗೆ ನನ್ನಾತ್ಮವೂ ಸಲ್ಲದು;
ನಿನ್ನಿರವೆ ನನ್ನ ಸುಪ್ತ ಶಕ್ತಿ, ನನ್ನ ಮುನ್ನಡೆಸುವ ಚೇತನ,
ಬಾಳಿಗೊಂದು ದಿಕ್ಕುಕೊಡುವ ನನ್ನಂತರಾತ್ಮದ ಲಕ್ಷಣ.

ನನ್ನ ಬದುಕಿನ ಅರ್ಥ ನೀನು, ಸತ್ಯದೊಳಗಿನ ಸುಪ್ತ ಸತ್ಯ,
ಚೆಲುವು ಚೆಲುವಾಗಿಸುವ ಸತ್ವ, ತೃಪ್ತತ್ವತೆಯ ಯುಕ್ತ ತತ್ವ;
ನನ್ನಸ್ಥಿತ್ವದ ಸಾರ ನೀನು, ಜನ್ಮ ಜನ್ಮಾಂತರದ ಹಂಬಲ,
ನಾನು ನಾನಾಗಿರುವ ಕಾರಣ, ನನ್ನ ಮುನ್ನಡೆಗೆ ಪ್ರೇರಣ.

ನೀರ ಸಾರವಿರದ ಮೋಡ, ಒಡೆದ ಒಣ ಬರೆ ಚಿಪ್ಪು ನಾನು,
ನಿನ್ನ ನೆರಳಿನ ಪ್ರೀತಿ ಆಸರೆ ನನ್ನ ಬಾಳಿಗೆ ಮುಗಿದ ಕ್ಷಣವೆ -
ಬದುಕು ಒಂದು ವ್ಯರ್ಥ ಸಾಧನೆ, ಮುಗಿಯದಂತ ನೋವು ಯಾತನೆ,
ದಿಕ್ಕು ಲಕ್ಷ್ಯ ಮರೆತು ನಡೆಯುವ ನಿರರ್ಥಕತೆಯ ಅದಮ್ಯ ದುಡಿಮೆ.

ನೀನೆನ್ನೊಳಗಿನ ದಿವ್ಯ ರೂಪ, ಸುಂದರತೆಯ ಪರಿಕಲ್ಪನೆ,
ಸತ್ಯಸತ್ಯತೆ ನಾ ನಿರ್ಧರಿಸುವ ನನ್ನ ನಿಕಷ, ಪರೀಕ್ಷಣೆ;
ನಿನ್ನಿರವು ನನಗೆ ಒಂದೆ ಸಾಕು, ನೀನೆ ನನ್ನ ತ್ರಪ್ತ ಭಾವ,
ನನ್ನಂತರಂಗದ ಸೌಗಂಧ, ನನ್ನಾತ್ಮ ಪ್ರಭೆಯ ನಂದಾದೀಪ.

ನೀನೆನ್ನ ಬೆಳಕು ಒಳಗೆ ಹೊರಗೆ, ಆಗ ಈಗ ಮುಂದಕೆ,
ನಿನ್ನ ಬೆಳಕಿನ ಗರ್ಭದಿಂದ ಸಿಡಿದ ಕಿಡಿ ಈ ಜೀವನ;
ಮೋಡಚ್ಛಾದಿತ ಗಗನದಲ್ಲಿ ಅಡಗಿ ನೀ ಮರೆಯಾದರೆ,
ಮಸುಕುಗೊಂಡ ನನ್ನ ಬಾಳು ಬಾಡುವುದು ಖಡ ಖಂಡಿತ.

ಅಡೆತಡೆಗಳ ಸರಣಿಯನ್ನು ದಾಟಿ ನನ್ನ ಬಳಿಗೆ ಬಾ,
ಸುರಸುರರೂ ಕರುಬುವಂತ ತೃಪ್ತಭಾವ ನನಗೆ ತಾ;
ನೀನು ನಾನು ಸೇರಿದಾಗ ನಡೆವ ಸುಖದ ಚೈತ್ರ ಕೂಟ
ಲೋಕ ಲೋಕದಲ್ಲಿ ರಂಗು ಚೆಲ್ಲುವುದನು ನೋಡು ನಲ್ಲೆ.

ನೀನು ನಾನು ಸೇರಿದರೆನೆ ಪರಿಪೂರ್ಣತೆ ಅಲ್ಲಿ ನಮಗೆ,
ಭಗ್ನಗೊಂಡ ಗಾಜು ನಾವು ದೂರ ದೂರ ಬದುಕುವಾಗ;
ಎಷ್ಟು ಕಾಲ ಹೀಗೆ ನಾವು ನೋವಿನಿಂದ ಬದುಕಬೇಕು?

ನಿಷ್ಠುರತೆ ತೋರಿ ದಾರಿ ಕಡೆದು ನೀನು ನಾನು ಸೇರಬೇಕು.
ಕಾಲಗತಿಯ ಓಟದಲ್ಲಿ ವಿಯೋಗ ಭೇಟಿ ಸಹಜ ತಾನೆ?
ಕಹಿಯನುಂಡ ಮೇಲೆ ಸಿಹಿಯ ಸುಖವು ತುಂಬ ಹಿತವು ತಾನೆ?
ಕಾಲ ಭ್ರಮಣ ಮೀರಿ ನಾವು ಸಮಾಗಮವ ಕಾಣಬೇಕು,
ವಿಯೋಗ ಮತ್ತೆ ಬರದ ಹಾಗೆ ಒಬ್ಬರೊಬ್ಬರ ಬಿಗಿ ಹಿಡಿಯಬೇಕು.

ನೀನು ನಾನು ಸೇರಿದಾಗ ಕ್ಷಣಕ್ಷಣವೂ ದಿನವೆ ನಮಗೆ,
ದೂರ ದೂರವಿರುವ ಕಾಲ ಮುಗಿಯದ ಕಡು ಕತ್ತಲೆ;
ನಿನ್ನ ಬೆಳಕಿನಲ್ಲೆ ನನ್ನ ಸ್ವಪ್ನ, ಸತ್ಯ, ಸುಖದ ಭರವಸೆ,
ನೀನಿಲ್ಲದಾಗ ಎಲ್ಲ ಬಯಲು, ಶೂನ್ಯ, ಕತ್ತಲೆ, ನಿರ್ಜೀವತೆ.

Wednesday, April 27, 2016
Topic(s) of this poem: love
COMMENTS OF THE POEM
READ THIS POEM IN OTHER LANGUAGES
Close
Error Success