ಯಾವ ದೇವಲೋಕದಿಂದ ಭೂಮಿಗಿಳಿದ ದೇವಿ ನೀನು,
ಯಾವ ದಿವ್ಯ ಸಂಕಲ್ಪದಿಂದ ನಮ್ಮ ಲೋಕಕೆ ಬಂದೆಯೋ?
ಯಾರ ಜೀವನ ಬೆಳಗಲೆಂದು, ಯಾರ ದಾರಿ ಕಡೆಯಲೆಂದು
ನಿನ್ನ ಭವ್ಯ ದಿವ್ಯ ರೂಪದಿಂದೀ ನಿಮ್ನ ಧರೆಗವತರಿಸಿದೆ?
ನಿನ್ನ ಘನೌನ್ನತ್ಯ ನೋಡು, ನಿನ್ನ ಮೋಹಕ ರೂಪ ನೋಡು,
ಒಳಗು ಹೊರಗು ಬೆಳಗುವಂತ ನಿನ್ನಲೌಕಿಕ ಕಾಂತಿ ನೋಡು;
ನನ್ನೊಳಗಿನ ದುಡುಕು, ಕೋಪ, ದ್ವಂದ್ವ, ದ್ವೇಶ ಧೂಮರಾಶಿ
ಅರಗುವಂತ ನಿನ್ನವತರಣ ನಮ್ಮೀ ಲೋಕದಸಾಮಾನ್ಯ ಪುಣ್ಯ.
ನೀನು ಚೆಲುವೆ, ರೂಪದಲ್ಲಿ, ನಿನ್ನಾಂತರ್ಯ ವಿನ್ಯಾಸದಲ್ಲಿ,
ನಿನ್ನ ನಡೆ ನುಡಿ ನಡತೆಯಲ್ಲಿ, ಪ್ರಭಾ ಮಂಡಲ ವಲಯದಲ್ಲಿ;
ನಿನ್ನ ದರ್ಶನದಿಂದ ನನಗೆ ಹಾಲ ಹೊಳೆಯಲಿ ಮಿಂದ ಅನುಭವ,
ದೇಹ ಐಹಿಕಗಳನು ಮರೆತಲೌಕಿಕತೆಯ ದಿವ್ಯ ಅನುಭವ.
ಕತ್ತಲೊಡೆದು ಬರುವ ಸೂರ್ಯ ಬೆಳಕು ಧಾರೆ ಹರಿಸುವಂತೆ,
ಮುಗಿಲಿನಿಂದ ಸುರಿವ ಮಳೆಯು ಭೂಮಿಯನ್ನು ಚಿಗುರುವಂತೆ,
ದಿಶೆ ಮರೆತ ಈ ಭೂಮಿಯಲ್ಲಿ ದೇವದೂತಳಾಗಿ ಬಂದೆ,
ಯಾರು ಏನು ಹೇಗೆಯೆಂಬ ಸ್ವಂತ ಜ್ಞಾನ ನನಗೆ ತಂದೆ.
ನೀನು ಸಾಕ್ಷಾತ್ ದೇವಿ ನನಗೆ, ನನ್ನ ಜೀವದ ಬೆಳಕು ನೀನು,
ನನ್ನಾತ್ಮ ನಂದಾದೀಪ ಜ್ಯೋತಿಯ ಕಾಪಿಡುವ ತೈಲ ನೀನು,
ನನ್ನ ಮೈಯ ಬೆಚ್ಚಗಿಡುವ ನನ್ನ ಹೃದಯದ ಮಿಡಿತ ನೀನು,
ನನ್ನ ಜೀವನ ದಾರಿ ನೀನು, ನನ್ನರ್ಥ, ಜೀವನ ಧ್ಯೇಯವು.
ನೀನಿದ್ದರಾಗ ನಾನುಂಟು, ನನ್ನ ಜೀವನ ಪಯಣವುಂಟು,
ನವನವೀನ ಭಾವ ಕಲ್ಪನೆ, ನವನವೋನ್ಮಿತ ರಸವು ಉಂಟು;
ನೀನು ನನ್ನನು ಮುಂದೆ ನಡೆಸುವ ದಿವ್ಯ ಸುರಮ್ಯ ಪ್ರೇರಣೆ,
ನನ್ನ ದೈವೀಕತೆಗೆ ನಡೆಸುವ ನನ್ನೊಳಗಿನ ನವ ಚೇತನ.
ನನ್ನೊಳಗೆ ನೀನು ಸ್ಫುರಿಸಿದಾಗ, ಏನೋ ಶಕ್ತಿ ಬಲವು ನನಗೆ,
ಲೋಕವನ್ನೆ ಜುಸುವಂತ ಅಸಾಧಾರಣ ಉತ್ಸಾಹವು;
ನೀನು ನನ್ನ ವಸಂತ ಋತುವು, ನನ್ನೊಳಗಿನ ಮಧುರ ಗೀತೆ,
ನನ್ನಂತರಂಗದ ಸಂಗೀತ, ನನ್ನ ಜೀವನ ಸಮೃಧ್ಧಿಯು.
ಮಬ್ಬು ಕವಿದ ಧರೆಗೆ ನೀನು ಶುಭ್ರ ಬೆಳಕಿನ ಪುಂಜ ತಂದೆ,
ದಾರಿ ತಪ್ಪಿದ ನನ್ನ ಜೀªಕೆ ದಾರಿದೀಪವಾಗಿ ಬಂದೆ;
ನಂದುತಿದ್ದ ಪ್ರಜ್ಞಾಲೋಕದ ಜ್ವಲಂತ ಶುಭ್ರ ಜ್ಯೋತಿಯಾಗಿ
ಭೂಮಿಯೆಲ್ಲ ಬೆಳಗುವಂತ ದಿವ್ಯ ಪ್ರಜ್ಞೆ ನನಗೆ ತಂದೆ.
ಜೀವ ಜೀವ ಮೊಳೆಯುವಂತ ನನ್ನೊಳಗಿನ ಶಕ್ತಿ ನೀನು,
ಜವ್ವನಿಕೆಯ ಬುಗ್ಗೆ ಹರಿಸುವ ಲಾವಣ್ಯದ ಘನ ಶಿಲ್ಪವು;
ನಿನ್ನೊಡನೆ ಬೆರೆತ ಮೇಲೆ, ನಿನ್ನೊಳಗೆ ಬೆಸೆದ ಮೇಲೆ,
ಮತ್ತೆ ನಿನ್ನ ಬಿಟ್ಟು ನಾನು ಬೇರೇನನೂ ಬಯಸೆನು.
This poem has not been translated into any other language yet.
I would like to translate this poem