ಭರವಸೆ Poem by PRAVEEN KUMAR Kannada Songs

ಭರವಸೆ

ನೀನು ಎಲ್ಲೋ, ನಾನು ಎಲ್ಲೋ, ನಮ್ಮ ಮಧ್ಯದ ದಾರಿ ಎಲ್ಲೋ,
ನಡೆದ ದಾರಿ ಅಡ್ಡತಿಡ್ಡಿ, ತಿರುವು, ಸುತ್ತು, ಆಕಸ್ಮಿಕ,
ನಡೆವ ದಾರಿ ಅನಿಶ್ಚಿತ, ಅನಿಷ್ಕøಷ್ಟ, ಅಸ್ಪಷ್ಟವು,
ಮುಂದಿರುವ ದಾರಿ ಬರೆ ಕುರುಡು, ಕಾರ್ಗತ್ತಲು, ಅಸ್ತವ್ಯಸ್ತ;
ಹೇಗಿರಲಿ ದಾರಿ, ನಮ್ಮ ನಡೆಗೆ ನಿಲುಗಡೆಯ ನೆಮ್ಮದಿಯೇ ಇಲ್ಲ,
ನಿನ್ನ ನನ್ನ ಶೋಧನೆಯಲ್ಲಿ ವಿರಾಮ ಬಿಡುವಿಗೆ ವೇಳೆಯಿಲ್ಲ;
ಎದ್ದು ಬಿದ್ದು, ತಿರುಗಿ ಸುತ್ತಿ, ನಡೆವುದೊಂದೆ ಜಾಯಮಾನ,
ವಿಧೆ ವಿಧಿಸಿದಲ್ಲಿ ಮಾತ್ರ ಕ್ಷಣಾರ್ಧ ನಾವು ಸೇರಬಹುದು;
ಕಾಣದಂತ ಕೈಯ ಸೇರಿದ ಆಟಿಗೆಯ ವಸ್ತು ನಾವು,
ನಮ್ಮೊಳಗಿನ ಇಷ್ಟನಿಷ್ಟ ತೇವ ಮರೆತ ಮುಗಿಲಿನಂತೆ.

ಕಾಲೆಲ್ಲಿ ನಡೆಸಲಿ, ನಮ್ಮೊಳಗೆ ಸದಾ ನಾವಾಗಿರುವ ಹಾಗೆ,
ದಾರಿ ಹೇಗೋ ಇರಲಿ, ನಮ್ಮೊಳಗೆ ಬೆಸುಗೆ ಬಿಡದ ಹಾಗೆ,
ಕಳಚಿ ಬಿದ್ದ ಆಶೆ ಕನಸು ಬಯಕೆ ಭಾರಗಳನು ಹೊತ್ತು
ಕಾಲೆಳೆಯಬೇಕು ದಾರಿಗುಂಟ ತಿಳಿಯದತ್ತ ಕುಂಟುತ;
ದಣಿವು ತುಂಬಿದ ನಡಿಗೆಯಲ್ಲೂ, ನಾನು ನಿನ್ನ ಮರೆವುದಿಲ್ಲ,
ನನಗೆ ಗೊತ್ತು, ನನ್ನನೆಂದೂ ನೀನು ಕೂಡಾ ಮರೆವುದಿಲ್ಲ;
ನಮ್ಮ ದಾರಿ, ಈ ನಡೆ ವಿಧಿಗಳು, ದಣಿವು, ನಿರಾಶೆ ಬಾಹ್ಯ ಚಿಪ್ಪು,
ನಿನ್ನ ನನ್ನ ಸುಸಂಬಂಧ ಸದಾ ಚಿಪ್ಪಿನೊಳಗೆ ಸ್ಥಿರ, ಸುಭದ್ರ;
ಕಾಲಗತಿಯಲೊಂದು ದಿನ ಚಿಪ್ಪು ಬಾು ತೆರೆದು ಅಗಲ,
ನಾನು ನೀನು ಒಳಗೆ ಹೊರಗೆ ಬೆಸೆಯುವುದು ಸತ್ಯ, ದಿಟ.

ಕತ್ತಲಡರಿದೆ, ಕಾರ್ಗತ್ತಲೆ ನಮ್ಮ ಕವಿದಿದೆ ಸುತ್ತಲು,
ದಾರಿಗುಂಟ ಕುರುಡು ಹೆಜ್ಜೆಯನಿಟ್ಟು ನಡೆದಿದೆ ನಡೆತವು;
ನಮ್ಮೊಳಗೆ ಪ್ರೀತಿ ನಂದಾದೀಪವು ಶುಭ್ರ ಬೆಳಕನು ನೀಡುತ
ಕತ್ತಲೆಯ ಪರಿಕ್ರಮಣದಲ್ಲಿ ನಮ್ಮ ನಡೆಸಿದೆ ಮುಂದಕೆ;
ಅದೆಷ್ಟು ಕಾಲ ಹೀಗೆ ನಾವು ಹಿಂದೆಮುಂದೆಯನರಿಯದೆ,
ಘಳಿಗೆ ಘಳಿಗೆ ವಿರಹದಲ್ಲಿ ಜಜ್ಜರಿಯಬೇಕೋ ತಿಳಿಯದು;
ನನ್ನ ನೋವಿನ ಆಳ ತಿಳಿದಿದೆ, ನಾ ಸಹಿಸಬಲ್ಲೆನು ನೋವನು,
ನೀನೆಲ್ಲೋ ಹೇಗೋ, ಅದೇನು ನೋವೋ ಎಂಬುವುದನು ತಿಳಿಯದೆ,
ಹೇಗೆ ನೀನದನು ತಡೆದು, ಹಿಡಿದು, ನಡೆಯುವಿಯೋ ಕಾಣದೆ
ನನ್ನಜ್ಞಾತ ಜೀವ ತತ್ತರಿಸಿದೆ, ಹೆದರಿ ಬೆದರಿ ಕಂಗೆಟ್ಟಿದೆ.

ನೀನು ನಾನು ಸೇರಿದಾಗ, ನಮ್ಮ ದಾರಿ ಕೂಡಿದಾಗ,
ನನ್ನ ತೋಳಲಿ ನಿನ್ನ ಹಿಡಿದು, ನನ್ನೆದೆಗೆ ಕಚ್ಚಿ ಹಿಡಿದು,
ನಿನ್ನ ಮುಖದ ತುಂಬ ನನ್ನ ತುಟಿಯ ಮುದ್ರೆಗಳನು ಒತ್ತಿ,
ನನ್ನ ದೇಹದ ಕಾವಿನಿಂದ ನಿನ್ನ ಶ್ರಮದ ದಣಿವು ಸರಿಸಿ,
ನಿನ್ನ ತೊಯ್ದ ಕಣ್ಣಿನಿಂದ ಕಣ್ಣೀರಿನ ತೇವವೊರೆಸಿ,
ನಿನ್ನೆದೆಯ ನೋವಿನ ಭಾರ ಸರಿಸಿ, ನನ್ನ ಪ್ರೀತಿಯನಲ್ಲಿರಿಸಿ,
ಹೊಸತು ಬಣ್ಣ, ಸೌಗಂಧ, ತಾಳ, ಭಾವ ಸಂಗೀತದಿಂದ,
ಹೊಸತು ಸಿರಿಯ ಲೋಕ ನಿನಗೆ ತಂದು ಕೊಡುವ ಆಶೆ ನನಗೆ;
ಇನ್ನೆಷ್ಟು ಕಾಲ ಆ ಸುಯೋಗಕ್ಕಾಗಿ ನಾನು ನೀನು ಕಾಯಬೇಕೋ,
ಕಾಲೆಳೆಯಬೇಕೋ ದಾರಿಗುಂಟ ತಿಳಿಯದತ್ತ ಕುಂಟುತ.

Wednesday, April 27, 2016
Topic(s) of this poem: love
COMMENTS OF THE POEM
READ THIS POEM IN OTHER LANGUAGES
Close
Error Success