ಹೊಸ ಚೈತನ್ಯದ ಚಿನ್ನದ ರಥದಲಿ Poem by Praveen Kumar in Bhavana

ಹೊಸ ಚೈತನ್ಯದ ಚಿನ್ನದ ರಥದಲಿ

ನಿರೀಕ್ಷೆ ಮಾರುತದ ಸುಳಿಮೆಲ್ಲದ
ನಿರಭ್ರ ಪ್ರಶಾಂತ ಆಕಾಶದೊಳಗಿಂದ
ಅನಂತ ನೀಲ ನಿರ್ವಾತದೊಳಗಿಂದ
ಬರುವಳು ಬರುವಳು ನಮ್ಮ ಪ್ರತೀಕ್ಷಾ,
ತರುವಳು ಅಪೂರ್ವ ಹರ್ಷದ ವರ್ಷ;
ಕತ್ತಲೆ ಚದರಿಸಿ, ಸುತ್ತಲು ಹಬ್ಬುವ,
ಮೆತ್ತನೆ ಬೆಳಕಿನ ಅರುಣೋದಯದಂತೆ,
ಮಾಗಿಯ ಚಳಿಯ ವಿಷಣ್ಣತೆಯಲ್ಲಿ,
ಸೂರ್ಯನ ಬೆಚ್ಚನೆ ಕಿರಣಗಳಂತೆ,
ಹಬ್ಬಿದ ದಟ್ಟ, ಮಬ್ಬನು ಕಬಳಿಸಿ,
ಕೊಬ್ಬಿದ ಮೋಡದ, ದಟ್ಟಣೆ ಚದರಿಸಿ,
ಹೊಸ, ಹೊಸ, ಬಣ್ಣದ ಕನಸಿನ ಪ್ರಭೆಯಲಿ,
ಹೊಸ ಚೈತನ್ಯದ, ಚಿನ್ನದ ರಥದಲಿ,
ನಮ್ಮೀ ಲೋಕದ ನೀರಸತೆಗೆ ತರುವಳು,
ಹೊಸ, ಹೊಸ, ರಸ, ಹೊಸ ಸುಖ, ಹೊಸ ಆಶೆ.

ದೂರದ ದಿಗಂತದಲ್ಲೇನೋ ಸಂಭ್ರಮ,
ಆತುರ, ಕಾತುರ, ನಿರೀಕ್ಷೆ, ಪ್ರತೀಕ್ಷೆ;
ಅತಿಥಿಯ ಆದರದ ಸುಸ್ವಾಗತಕ್ಕೆಂದು,
ಕೈಚಾಚಿ ಮನೆಮನ ತುಂಬಿಸಲೆಂದು,
ಕಲ್ಪನೆ, ರಂಗಿನ, ಸುಳಿಗಾಳಿಯನೆಬ್ಬಿಸಿ,
ಸುಂದರ ಕನಸಿನ, ಮಹಾಪೂರವ ತರುವಳು;
ಘನತೆಯಚ್ಫಾದಿತ ಸೌಗಂದವ ಹೊತ್ತ
ಮಲಯ ಮಾರುತದಂತೆ ಮನಮುತ್ತಿ
ಸಂತೋಷ ಸೌಹಾರ್ದದ ಘನ ಹೊಳೆಯನೆ ಹರಿಸುತ
ಬಾಳನು ಸುಖದನುಭವ ಮಾಡುವಳು.

ಪ್ರೀತಿ ಪ್ರೇಮದ, ಪ್ರಭಾವಳಿಯಲ್ಲಿ,
ಚಿನ್ನದ ಸಿಂಹಾಸನ ಸುಪ್ಪತ್ತಿಗೆಯೇರಿ,
ನಮ್ಮ ವಿಶಾಲ ಸಾಮ್ರಾಜ್ಯದ ಮೇಲೆ,
ರಾಜತ್ವವ ನಡೆಸುವ, ಸಾಮ್ರಾಜ್ಞಿಯು ಅವಳು;
ನಮ್ಮರಿವಿಗೆ ಮೀರಿದ, ಘನಗುಣಸಾಂದ್ರ,
ಚಿನ್ನದ, ರನ್ನದ, ಸುಕೋಮಲ ಹೂವು,
ಅಂತ: ಕರಣದ ಅತಿಕೋಮಲತೆಯ ಆ ಧಾರೆ
ಕವಲುಕಾರಿಯ ಅಭದ್ರತೆಯಲ್ಲಿ
ಘನತೆ, ಗಾಂಭೀರ್ಯದ, ಸರಿದಾರಯ ತೋರಿ,
ತೀಡಿ, ತೀಡಾಡಿ, ಮುನ್ನಡೆಸುವ ರಾಣಿ;
ಇದೆಂದೂ ಇದಲ್ಲ, ಅದೊಂದು ಅದಲ್ಲ,
ಅವಳವತರಿಸಲು ಈ ಲೋಕ, ಬಲು ಸುಂದರ ನಾಕ.

Friday, April 29, 2016
Topic(s) of this poem: life
COMMENTS OF THE POEM
READ THIS POEM IN OTHER LANGUAGES
Close
Error Success