ವೇಷಭೂಷಣವಿಲ್ಲದೆ ರಂಗಕ್ಕೆ ಕಾಲಿಟ್ಟವರು ನಾವು Poem by Praveen Kumar in Bhavana

ವೇಷಭೂಷಣವಿಲ್ಲದೆ ರಂಗಕ್ಕೆ ಕಾಲಿಟ್ಟವರು ನಾವು

ವೇಷಭೂಷಣವಿಲ್ಲದೆ, ರಂಗಕ್ಕೆ ಕಾಲಿಟ್ಟವರು ನಾವು,
ನಮ್ಮ ಪಾತ್ರದ ಭಾರ ಹೊತ್ತು, ಮಧ್ಯೆಮಧ್ಯೆ ನಟಿಸಬೇಕು;
ಕತ್ತಲೆಯ ರಂಧ್ರದಿಂದ, ಬೆಳಕಿನ ಕಿಡಿಯಾಗಿ ಸಿಡಿದ ನಾವು,
ಮತ್ತೆ, ಕತ್ತಲೆಯ ಗರ್ಭಕ್ಕೆ ಹಿಂತಿರುಗುವುದು ಶತಸಿದ್ಧ.

ಬರುವಾಗ ಬರೆ ಸೊನ್ನೆ, ನಾವು, ಹೋಗುವಾಗಲೂ ಸೊನ್ನೆ,
ಮಧ್ಯದಲಿ ನಡೆಯುವುದು, ವರ್ಣಬಣ್ಣಗಳ ಹಾರಾಟ, ಹೋರಾಟ;
ನಡೆಯುವುದೇನೇ ಇರಲಿ, ಅದು ರಂಗಮಂಚದ ಬಣ್ಣದಾಟ,
ಕತ್ತಲೆಯ ಗರ್ಭದಲಿ ನಾವು ನಿರ್ಗುಣರು, ನಿರಾಕಾರ, ನಿರ್ವರ್ಣರಾಶಿ.

ರಂಗ ಮಂಚದ ಮೇಲೆ, ಸಿದ್ಧ ಸಂಗೀತಕ್ಕೆ ತಗ್ಗಿಬಗ್ಗಿ,
ರಸಭಂಗ ಬಾರದ ಹಾಗೆ, ಕುಣಿದು ತಾಳಹಾಕಬೇಕು;
ಸಿದ್ಧಪಾತ್ರಗಳ ಚರ್ಯೆಚಾಳಿಗೆ ಬದ್ಧ ಹುಟ್ಟು ಸಂಬಂಧದಿಂದ,
ನಮ್ಮ ನಮ್ಮ ಪಾತ್ರಗಳ ಸಂಬದ್ಧತೆ ಹುಟ್ಟುಹಾಕಬೇಕು.

ಅಜ್ಞಾತ ಮಹಾಸಾಗರನಂತ ಗರ್ಭದಾಳದಿಂದ,
ಸಿಡಿದ ಚಲನೆಯೆ ನಾವು, ಜೀವಕಿಡಿಗಳ ರಾಶಿ;
ಅದಾವ ಮೂಲ ಲಕ್ಷದತ್ತ, ನಡೆಯುವುದೇ ನಾಟಕದ ರಮ್ಯಕ್ರೀಡೆ,
ಯಾರ, ಯಾವ, ಸುಖತೃಪ್ತಿಗಾಗೀ ಭವ್ಯ, ವಿಶ್ವ ತಾಳ ಮೇಳ?

Friday, April 29, 2016
Topic(s) of this poem: life
COMMENTS OF THE POEM
READ THIS POEM IN OTHER LANGUAGES
Close
Error Success