ಭಾವನಾ Poem by PRAVEEN KUMAR Kannada Poems

ಭಾವನಾ

ಹಸಿದ ಇಂದ್ರಿಯ ಬೆನ್ನನೇರಿ
ಇಂದ್ರಲೋಕದಿಂದ ಹಾರಿ
ಬಂದಳವಳು ಭಾವನಾ,
ಹೃದಯ, ಜೀವ ಚೇತನ;
ಅಪ್ಸರೆಯರ ಚೆಲುವು ಮೀರಿ,
ಯಕ್ಷಿಯರ ವೈಯಾರ ಮೀರಿ
ಬಣ್ಣ ಬಣ್ಣದ ಬೆಳಕು ತೂರಿ
ಬಳಕಿ ಬಳುಕಿ ಬಂದಳು;
ಅಂತರಿಕ್ಷ ದಾರಿುಂದ,
ಎದುರು ಬದುರು ದಿಕ್ಕಿನಿಂದ
ವಿಶ್ವಮಿತ್ರ ಸ್ಟೃಯಾಗಿ,
ಹೊಸತು ಲೋಕದ ಬೀಜವಾಗಿ,
ಧ್ರುವದಿಂದ ಧ್ರುವವರೆಗೆ
ಅದ್ರಶ್ಯ ಶಕ್ತಿ ವಿದ್ಯುತಾಗಿ
ಹೃದಯ ತೊಯ್ದ ಬಂದಳು,
ಜೀವ ಹಬ್ಬಿ ನಿಂತಳು.
ಭೋರ್ಗರೆವ ಕಡಲು ರೂಪದಲ್ಲಿ
ತೆರೆಯನೇರಿ ಬಂದಳು,
ಮುಂಜಾವು ಕಿರಣ ರೂಪದಲ್ಲಿ
ಹುರುಪುತ್ಸಾಹ ತಂದಳು.

ಉಗಮದಿಂದ ಚಿಮ್ಮಿ, ಹಬ್ಬಿ,
ಬುದ್ಧಿಮತಿಗೆ ಸುತ್ತಿ ಬಳ್ಳಿ,
ಕುದಿವ ನೀರಿನ ಉಗಿಯ ಹಾಗೆ,
ಶಿವಗಂಗಾವತರಣದಂತೆ,
ಕವಿಯ ಪ್ರತಿಭೆ ಸ್ಫುರಣದಂತೆ,
ಶ್ರುತಿಯಗೊಂಡ ಕರಣದಿಂದ
ಅಂತರಾಳ ಪ್ರೇರಣೆಯನೇರಿ
ಇದ್ದ ಬಿದ್ದ ಕಿಂಡಿ ಮುಚ್ಚಿ
ತುಂಬಿ ತುಂಬಿ ಬಂದಳು.

ಅರುಣೋದಯದ ಇಬ್ಬನಿಯ ಹಾಗೆ,
ನದಿಯ ತಟದ ತೇವದಂತೆ
ಹನಿದು ಹನಿದು ಬಂದಳು,
ಮೈಯ ತುಂಬಿ ನಿಂತಳು;
ಹುಣ್ಣಿಮೆಯ ತಂಗಾಳಿಯಂತೆ,
ತಪಸಿಯರ ತಪಶಕ್ತಿಯಂತೆ
ಕುಣಿದು ಕುಣಿದು ಬಂದಳು
ಗರ್ಭಗುಡಿಯಲಿ ನಿಂತಳು;
ಅಂತರಿಕ್ಷದಲ್ಲಿ ತುಂಬಿ,
ಮುಗಿಲುಗಳಿಗೂ ರಂಗುಕೊಟ್ಟು
ವಿಶ್ವರೂಪಿಯಾದಳು;
ಕಂಡಲೆಲ್ಲ ಅವಳೆ ಅವಳು,
ಅವಳ ಸೊಗಸು, ಮೈಯ ಮಾಟ,

ನಿಮಿಷ ನಿಮಿಷ ಮನದೊಳಾಟ,
ಪಾದದಿಂದ ತಲೆಯವರೆಗೆ
ಕೈಯ ಬೆರಳು ತುದಿಯವರೆಗೆ
ತುಂಬಿ ತುಂಬಿ ಹೊರ ಹರಿದಳು;
ರಾಗವಾಗಿ, ಸಂಗೀತವಾಗಿ,
ಕಾವ್ಯ ಹೃದಯ ಸ್ಫೂರ್ತಿಯಾಗಿ,
ಪುಣ್ಯ ಸರಿತ ರೂಪದಲ್ಲಿ
ಕಾವ್ಯವಾಗಿ ಮೊರೆದಳು.

ಹೃದಯ ಮೀರಿ, ಜೀವ ಸೀರಿ,
ಆತ್ಮದೊಳಗಿನ ಆತ್ಮವಾಗಿ
ನಗುವ ಚೆಲುವೆ ಭಾವನಾ,
ಅವಳ ನೋಟ ಕುಡಿಗೆ ಸೋತು
ಇಟ್ಟ ಹಜ್ಜೆಯೆ ಜೀವನ;
ಬುದ್ಧಿ ಪ್ರಖರತೆ ತಲೆಯ ಬಾಗಿ
ಪೂಜೆ ಸೇವೆಗೆ ಬಯಸುವಂತ
ಹೃದಯ ಪ್ರಜ್ಞೆ ಭಾವನಾ,
ಹೃದಯ ಬುದ್ಧಿ, ಆತ್ಮ ಪ್ರಜ್ಞೆ
ಕೂಡಿ ಜೀವದೊಳಗೆ ಹರಿವ
ಭಾವುಕತೆಯೆ ಭಾವನಾ;
ಒಲಿದು ಹೃದಯ ಮುಟ್ಟಿ ಬರುವ
ಅವಳ ತೋಳುಸೆರೆಯ ನಡುವೆ
ಎಲ್ಲ ಮರೆತು ತನ್ನನಿಡುವ
ಸುಖದ ಜೀವನ ಪಾವನ.

Friday, April 29, 2016
Topic(s) of this poem: life
COMMENTS OF THE POEM
READ THIS POEM IN OTHER LANGUAGES
Close
Error Success