ನನ್ನ ಸುತ್ತ Poem by Praveen Kumar in Bhavana

ನನ್ನ ಸುತ್ತ

ಅವಳೊಂದು ಅದೃಶ್ಯ ಬೇಲಿ,
ಬ್ರಹ್ಮರಂಧ್ರದಲ್ಲೂ ಬೆಂಬಿಡದ ಬೇಲಿ,
ಸ್ವಾತಂತ್ರ್ಯಕ್ಕಿಂತ ಹಿತವಾದ
ವಿಶ್ವಾಸ, ಬೇಲಿ;
ಈ ಬೇಲಿಯ ಮಧ್ಯದಲ್ಲಿ
ಅವಳಿಡುವ ಶಿಸ್ತಿನಲ್ಲಿ
ಹೊಣೆ ಮರೆತು ಇರುವುದರಲ್ಲಿ
ನಿಜ ಸ್ವಾತಂತ್ರ್ಯ ಕಂಡೆ.

ಹೊರಗಿನಿಂದ ಬಂದವಳು,
ಈಗ ಒಳಗೆ ತೊಡರಿಕೊಂಡು
ಅವಳಿಲ್ಲದೆ ಹೇಗಿದ್ದೆನೆಂದು
ನನ್ನ ನಾನು ಹುಡುಕಿ ಕೊಳ್ಳುತ್ತೇನೆ;
ಕತ್ತಲಾದಾಗ ಒಳಗೆ ಬೆಳಕು ಹಚ್ಚುವವಳು,

ಕಾಲು ತೊಡರಿ ಕೊಂಡಾಗ ಕೈಗೆ ಕೋಲು ಕೊಡುವವಳು,
ಹೂವುಗಳ ಮಧ್ಯೆ ಮುಳ್ಳಾಗಿ ಎಚ್ಚರಿಸುವವಳು,
ಅವಳು ಯುಗಾದಿಯ ಬೇವು ಬೆಲ್ಲದ ಹಾಗೆ,
ಹೊರಗೆ ಸಿಹಿಕಹಿ, ಕಹಿಸಿಹಿ,
ಒಳಗೆ ಸದಾ ಹಿತಕರ ಸಿಹಿ;
ಹೂವಾಗಿ, ಹಣ್ಣಾಗಿ,
ಶಸ್ತ್ರ ಕ್ರಿಯೆಗೆ ಕತ್ತರಿಯಾಗಿ
ಹಿಂದೆ ಮುಂದೆ
ಸುತ್ತುತ್ತಿರುತ್ತಾಳೆ,
ದೂರ ನಿಯಂತ್ರಣದಿಂದ
ಮುನ್ನಡೆಸುತ್ತಾಳೆ.

Friday, April 29, 2016
Topic(s) of this poem: life
COMMENTS OF THE POEM
READ THIS POEM IN OTHER LANGUAGES
Close
Error Success