ಎತ್ತರ Poem by Praveen Kumar in Bhavana

ಎತ್ತರ

ನಿನ್ನೆತ್ತರ ನಿನಗಿದ್ದರೆ ಅವರಿವರ ಭಯ ನಿನಗೇಕೆ?
ನಿನ್ನೆತ್ತರವೇರುವವ ಮತ್ತೊಬ್ಬನಿರಲಾರ;
ಮೊಣಕಾಲೆತ್ತರ ನಿಂತು ಹಂಗಿಸುವವರ ಹಂಗೇಕೆ?
ಕಣ್ಣೆತ್ತಿ ನಿನ್ನ ಕಡೆ ನೋಡುವವನಲ್ಲಿರಲಾರ.

ನೆಲ ಮೀರಿ ತಲೆಯೆತ್ತಿ ನೀಲಾಕಾಶಕೆ ನಿಂತವನೆ,
ಸಾವಿರ ವರ್ಣ ಸ್ವಪ್ನಗಳ ಮುಗಿಲಿನಲಿ ಕಂಡವನೆ,
ನಿನ್ನ ಪಾದತಳದಲ್ಲಿ ಬೆಳೆದಿರುವ ವಿಷವರ್ತುಲಗಳ
ಕಂಡು ನೀನೇಕಿಂತು ಭಯ ಭೀತಿ ಗೊಂಡಿರುವೆ?

ಕಾಲಿನ ಸುತ್ತ ಕಟ್ಟಿ ಹುತ್ತ ಪೀಡಿಸುವ ಬಳ್ಳಿಗಳು
ನಿನ್ನ ಹೆಜ್ಜೆ ಹಿಡಿತಕ್ಕೆ ಬಾಧಕ ತಂದೊಡ್ಡುವÀವೆ?
ನಿನ್ನ ಸುತ್ತ ಹಬ್ಬಿರುವ ವಿಷ ಮುಳ್ಳಿನ ಗಂಟೆಗಳು
ಕಾಲನ್ನು ಕಡಿದಾಗ ನಂಜೇರುವ ಭಯವೆ?

ಭಯಬೇಡ, ನಯಬೇಡ, ಸಮೀಕರಣ ಬೇಡವೆ ಬೇಡ,
ನಿನ್ನೆತ್ತರಕೆ ಕಣ್ಣಿಟ್ಟು ಮುನ್ನಡಿಯಿಟ್ಟು ಹೋಗು,
ತಲೆ ಬಗ್ಗಿ, ನೆಲನೋಡಿ, ಕಾಲಿಟ್ಟು ಕೆಡಬೇಡ,
ಸಾಗುವ ದಾರಿ ದೂರವಿದೆ, ನಿಷ್ಠುರದಿಂದ ಹೋಗು.

ನೀನಿಂತ ನೆಲದಲ್ಲಿ ಹುಟ್ಟಿರುವ ದೊಡ್ಡ ಕಾರಣಕೆ
ಅವರಿವರೆಲ್ಲ ನಿನ್ನ ಸಮಾನರಾಗುವುದುಂಟೆ?
ನಿನ್ನ ಕಾಲು ಮುಟ್ಟಿ ಚುಚ್ಚಿ ಸುತ್ತಮುತ್ತ ಹಬ್ಬಿರುವುದಕೆ
ಸಣ್ಣ ಗಿಡ್ಡ ಜೀವಿಗಳು ನಿನ್ನೆತ್ತರವೇರುವುದುಂಟೆ?

ಅವರದೊಂದು ಸಣ್ಣ ರಾಜ್ಯ, ನಿನ್ನದೊಂದು ಸಾಮ್ರಾಜ್ಯ,
ಹೋಲಿಕೆಗೆ ಮೀರಿದುದೀ ವಿಭಿನ್ನ ಲೋಕಗಳು;
ನೀನೇರಿರುವ ಎತ್ತರದಲ್ಲಿ ಸ್ವತ್ತವಿದೆ, ಸತ್ಯವಿದೆ,
ಕುಳ್ಳರಿಗೇನು ಗೊತ್ತು ನಿನ್ನೆತ್ತರದಾದೌಲತ್ತು?

ನೆಲದಲ್ಲಿ ಕಾಲಿಟ್ಟು, ಮುಗಿಲಿನಲಿ ತಲೆುಟ್ಟು
ಮುಳ್ಳುಬೇಲಿ ಕಲ್ಲುಗೆಲ್ಲುಗಳ ಮೆಟ್ಟಿ ನಿಂತು ಬಿಡು;
ಆಕಾಶದೆತ್ತರದ ಸಾಧನೆಯಯತ್ನದಲಿ
ಸಣ್ಣಪುಟ್ಟ ಬಿಕ್ಕಟ್ಟುಗಳ ಸಂಪೂರ್ಣ ಮರೆತು ಬಿಡು.
ನಿನ್ನ ಪಾದದಡಿಯಲ್ಲಿ ಕುಳ್ಳರ ಲೋಕ ನಡುಗಬೇಕು,
ನೀನಿಟ್ಟ ಹಜ್ಜೆಯಲಿ ನಿನ್ನೆತ್ತರವಿರಬೇಕು;
ನಿನ್ನೆತ್ತರದಲಿ ನಿಂತು ಮಾರ್ಗಕ್ಕೆ ಪರದಾಡದಿರು,
ನೀನಡೆವ ದಿಕ್ಕಿನಲಿ ದಾರಿ ಮೂಡಿ ಬರುತ್ತಿರಬೇಕು.

Friday, April 29, 2016
Topic(s) of this poem: life
COMMENTS OF THE POEM
READ THIS POEM IN OTHER LANGUAGES
Close
Error Success