ಹೀಗೇಕೆ? Poem by Praveen Kumar in Bhavana

ಹೀಗೇಕೆ?

ನಾವು ಸಮಾಜದ ನಿರ್ಲಜ್ಜ ಶುನಕಗಳು,
ನಾಯಕರೆಂದು ನಿರೂಪ ಹೊರಡಿಸುವ ನರಿನಿರಂಕುಶಿಗಳ
ಮನೆಬಾಗಿಲು ಕಾಯುವ, ಕರೆದರೆ ಬಾಲಬೀಸುತ ಬರುವ
ಜೀವವನೆ ಕೊಡುವ ನಿರ್ಜೀವ ಶುನಕಗಳು,
ದಿನವಿಡಿ ಹಸಿವಲ್ಲಿಟ್ಟು, ಕೊನೆಗೆ ರೊಟ್ಟಿತುಂಡನು ಕೊಟ್ಟು,
ಗೂಟಕ್ಕೆ ಸದಾ ಕಟ್ಟಿಟ್ಟು ನಮ್ಮ ಪೊರೆಯುವ ದೊರೆಗೆ
ಕೃತಜ್ಞ ಭಾರದಿ ಬಗ್ಗಿ ನೆಲಕ್ಕೆ ಮೂಗನು ತಿಕ್ಕುವ
ನಾವು ಪ್ರಜಾಪ್ರಭುತ್ವದ ನಿರ್ಗತಿಕ ಶುನಕಗಳು.

ದೊಣ್ಣೆ ಹಿಡಿದರೆ ಕಣ್ಣಮುಚ್ಚಿ ಮುಂದೆ ನಡೆಯುವುದು,
ಮಣ್ಣು ಮುಕ್ಕಿದವರ ಹಿಂದೆಬಿದ್ದು ಬೊಗಳುವುದು
ನಮ್ಮ ನಮ್ರ ಜಾಯಮಾನ, ಜೀವನದ ಧ್ಯೇಯ, ಧ್ಯಾನ;
ಹೊಟ್ಟು ತುಂಬಿದ ಧೂಳಿ ಗೋಣಿಚೀಲಗಳು ನಾವು,
ಲೋರಿ ಹೇರಿದ ಜಡಮರಳು ರಾಶಿ,
ನಿರಾಕಾರ, ನಿರ್ಗುಣ, ನಿರಾಳ, ನಿರಿಂದ್ರಿಯ ನಪುಂಸಕರು;
ಮೇಲೇರದ, ಭೂಮಿಗಿಳಿಯದ ತೃಪ್ತ ತ್ರಿಶಂಕುಗಳು,
ಬೆಳಕು ಕೊಡದ, ಬೆಳಕ ಕಾಣದ ಬೂದಿಬೇತಾಳಗಳು.

ನಮ್ಮ ಕಂಡವರಲ್ಲ ನಾವು, ಕಣ್ಣು ಬಿಟ್ಟಿವರಲ್ಲ,
ಮನಬಿಚ್ಚಿ, ಸ್ವಂತಿಕೆಯ ಅರ್ಥ ಅರಿತವರಲ್ಲ,
ಸಮಾಜದ ಸ್ಪ್ರಿಂಗಿನ ಕೀಗೆ ಕೈಯಾಡಿಸುವ ನಮಗೆ
ಯಂತ್ರ ಚಲನೆಗೆ ಮೀರಿ ಚೈತನ್ಯ ಬರಬೇಕೆಲ್ಲಿಂದ?
ಕೀರಲು ಧ್ವನಿಯನು ಮೀರಿ ಹಾಡು ಹೊರಡಬೇಕೆಲ್ಲಿಂದ?
ಬದಲಿಸಿಟ್ಟ ದಿಕ್ಕಲ್ಲಿ ಕೈಬೀಸಿ ಚಲಿಸುವೆವು,
ಪೂರ್ವ, ಪಶ್ಚಿಮ, ದಕ್ಷಿಣೋತ್ತರದ ಪರಿವೆ ನಮಗಿಲ್ಲ,
ಕಾಲಿಟ್ಟಿದ್ದೆ ದಿಕ್ಕು, ಕಣ್ಣಿಟ್ಟದ್ದೆ ಕೊನೆಯ ಸತ್ಯ.

ಭೂತಕಾಲದ ಭೂತ, ಭವಿಷ್ಯತ್ತಿನ ಭೀತಿಗಳು ನಮಗಿಲ್ಲ,
ಮುಚ್ಚಿರುವ ಪಂಚೇಂದ್ರಿಯದಿ ವಾರ್ತೆ ತಲಪುವುದಿಲ್ಲ;
ಕತ್ತಲೆಯ ಕೂಪದಲಿ ಕರಗಿ, ಕತ್ತಲಲೊಂದಾಗಿ
ಕಾಲತಾಳಕೆ ಮುನ್ನಡಿುಡುವ ನಿಶಾಟರು ನಾವು,
ಜೀವಚ್ಛಗಳು, ನೀರೊಳಗೆ ಬಾತಿರುವ ಸ್ಥೂಲ ಶವಗಳು;
ಬರೇ ಭಾರ, ಊದಿದ ಗಾತ್ರ, ಬೆಟ್ಟದಾಕಾರ,
ನೆಲಕ್ಕುರುಳಿದರೆ ಒಡೆದು ಹರಡುವುದು ದುರ್ಗಂಧದ ರಾಶಿ,
ಭಾವಭಾವನೆಯ ಗಾಳಿಗುಳ್ಳೆಗಳೊಡೆದ ಪಚ್ಛಲ ಪಾಚಿ.

ವಿಶ್ವವಿಕಸನ ಯಾನ ಕಾರಣ-ಸಾಧನ ನಾವು:
ದಿವ್ಯ ಪಯಣದ ಪುಣ್ಯ ಚೈತನ್ಯ ನಾವು;
ನಮ್ಮ ಗತಿ, ಈ ರೀತಿ, ಇನ್ನೆಲ್ಲಿಯ ಪಯಣ?
ವಿಕಾಸ ನಕ್ಷೆಗೆ ಯಾಕೀ ವಿಸ್ಮಯದ ವಿರಾಮ?
ದೂರ ಪಯಣದ ಮಧ್ಯೆ ದಣಿವನ್ನು ಕಳೆದು
ಮರುಸ್ಫೋಟಗೊಂಡು ವಿಕಸನ ಮತ್ತೆ ಮದಿಸಬೇಕು;
ನಾವು, ಸಮಾಜದ ನಿರ್ಲಜ್ಜ ಶುನಕಗಳು
ಮತಿ ಮಥಿತ ರಸಮಾನವರಾಗಿ ಮೂಡುತ್ತಿರಬೇಕು.

Friday, April 29, 2016
Topic(s) of this poem: police
COMMENTS OF THE POEM
READ THIS POEM IN OTHER LANGUAGES
Close
Error Success