ಕಾಂಡವ ವನ Poem by Praveen Kumar in Bhavana

ಕಾಂಡವ ವನ

ನಿನ್ನನ್ನು ಬಿಟ್ಟು ನಿನ್ನವರಾರಿಲ್ಲ ಈ ಕಾಂಡವವನದಲ್ಲಿ,
ತನ್ನತನದಗ್ನಿಯಲಿ ಸುಡುವ ಕಾದ ಬಾಣಲೆಯಲಿ;
ಎಲ್ಲ ಸ್ವಾರ್ಜನೆಗಾಗಿ, ಸ್ವಾಭ್ಯುದಯ ಯೋಜನೆಗಾಗಿ,
ನೀರಿನಲಿ ಬೇರಿಳಿಸಿ ಫಲ ತೆಗೆವ ದುಷ್ಟ ಹೊಂಚುಗಳು ತುಂಬ;
ಕೆಲವು ಹೊರಗೆ, ಹಲವು ಒಳಗೆ, ವ್ಯೂಹಗಳಾಳದಲಿ ಕೂಡ
ಹೆಡೆಯಾಡಿಸುವ ವಿಷ ಸ್ವಾರ್ಥ ಭುಸ್ ಭುಸ್ ಎನ್ನುವಲ್ಲಿ
ಶುದ್ಧಗಾಳಿ ನೀರಿಲ್ಲ, ಅಸ್ಖಲಿತ ಆತ್ಮಗಳಿಲ್ಲ,
ಸ್ವಾತಂತ್ರ್ಯ ಧಾರಾಳತೆಯಿಲ್ಲ, ವಿಷ ಕಲಬೆರಕೆಗಳೆಲ್ಲ;
ನಿರ್ಬಂಧಗಳ ಕಾಡು, ವಿಷಾನಿಲಗಳ ಜಾಲ;
ಕಣ್ಣಾಲಿಗಳ ತೆರೆದಿಟ್ಟು ನೀನಿಲ್ಲಿ ಉಸಿರಾಡು,
ನೀನೊಂಟಿ ಈ ಜನರಾಶಿಯ ನಡುವೆ,
ಎಡಬಲವಾಲದೆ ನಂಬಿಕೆಯ ಬಲದಿ ನೀನಿರಬೇಕು;
ತಮ್ಮೆದುರಾದಾಗ ಕೈಕಾಲು ಕಟ್ಟಿ ದೂರ ಸರಿಸುವ ದಾರಿಹೋಕರು,
ತಮ್ಮ ದಾಹಕೆ ಪರರ ರಕ್ತ ಬಸಿಯುವವರು,
ಇವರೆಲ್ಲರ ಮಧ್ಯೆ ನೀನೊಂಟಿ ಕಾಲೂರಿ ನಿಲ್ಲಬೇಕು,
ಸ್ವಾರ್ಥವ್ಯೂಹದ ಮಧ್ಯೆ ಜೀವನ ರಥವನೋಡಿಸಬೇಕು,
ನುಗ್ಗಿ, ಒಳನುಗ್ಗಿ, ಗುರಿ ಭೇದಿಸಿ ರುಂಡ ಚೆಂಡಾಡಬೇಕು,
ಕೊನೆಗೆ ಸ್ವಾರ್ಥ ಬೆನ್ನನ್ನಿರಿದಾಗ ಸೋತು ಧರೆಗುರುಳಬೇಕು.

ಇದೊಂದು ಘೋರಾರಣ್ಯ, ಕಾಂಡವವನ,
ವಿಷ ಜಂತು ಹಾವುಗಳ ಹುತ್ತ, ಅಡಗುತಾಣ;
ಯಾರದೋ ಹಸಿವು, ಯಾರದೋ ಅಗ್ನಿ ಸ್ಪರ್ಷ,
ಹಗೆ ಮೃತ್ಯುವಾಗಿ ಬರುವ ಸರ್ಪಾಸ್ತ್ರ, ರಣರೋಷ.

ಬೇರುಗಳಿಳಿಯುವಲ್ಲಿ, ಕಲ್ಲು ಬಂಡೆಗಳ ಹಾಸು,
ಬಂಡೆಗಳನೊಡೆದಲ್ಲಿ ನಸ್ಸಾರ ಒಣ ಮರಳಿನ ವಿಸ್ತಾರ;
ದಾರಿ ಬಳಲಿಕೆ ಸಹಿಸಿ, ಅಡೆತಡೆಗಳ ಬಗೆದು ಸಿಗಿದು,
ಅಸಂಖ್ಯ ಜೀವರಾಶಿಯ ನಡುವೆ ಜೀವಂತವಿರಲು,
ಬಾಯಾರಿಕೆ ಹಸಿವು ಭಾದೆ ನೀಗಿಸಲು,
ನೀರಿನಾಸರೆ ಹುಡುಕಿ ನೀನೆ ದೂರ ನಡೆಯಬೇಕು;
ಎಳೆತ ಸೆಳೆತದ ಮಧ್ಯೆ ಝರ್ಝರಿತವಾಗಿ
ಗ್ರಹ ಪ್ರಪಾತಗಳಲ್ಲಡಗಿ ಹೋಗುವೆ ನೀನು;
ಮುಂದೆ ಕೇಂದ್ರ, ಪರಿಧಿಗಳಿಲ್ಲ, ಗ್ರಹ ಉಪಗ್ರಹಗಳಿಲ್ಲ,
ಬರೆ ಭಾರ, ಮಣಭಾರದ ಜೀವಚ್ಛವ ಗಾತ್ರ;
ನಿನ್ನ ಪಥದಲಿ ನೀನು ತಿರುಗಬೇಕು,
ಋತುಚಕ್ರ ಉರುಳಾಟ ಸಹಿಸಬೇಕು,
ಹಿತಹಿತಗಳ ಹೀರಿ ಶಕ್ತಿ ದ್ವಿಗುಣಿಸಬೇಕು,
ತನ್ನಲ್ಲಿ ಬೇರೂರಿ ಅಂತರಂಗ ಬೆಳೆಸಬೇಕು;
ನೀನು ನೀನಾದರೆ ನಿನ್ನದು ಈ ಘೋರರಣ್ಯ, ಕಾಂಡವವನ,
ಎಲ್ಲರು ನಿನ್ನವರು, ನಿನ್ನಿಷ್ಟನಿಷ್ಟದ ಸೇವಕರು,
ಅಂದೆ ನೀನಜೇಯ, ಅಗ್ರಜ, ಲೋಕವಂದ್ಯ.

ನಿನ್ನ ದ್ಟೃ ನೆಟ್ಟಗಿರಲಿ, ನಿನ್ನ ನಡೆ ದಿಟ್ಟವಿರಲಿ,
ಗುಡ್ಡ ಕಣಿವೆ ಏರಿ ಇಳಿದು ದಾರಿ ಮುಂದೆ ನಡೆಯಲಿ,
ಎಡಬಲ ಮೇಲೆ ಕೆಳಗೆ ಎಂಬ ಚಿಂತೆ ಮರೆತರೆನೆ
ನಿನ್ನ ಬಲ, ನಿನ್ನ ಫಲ, ನಿನ್ನತನಕ್ಕಿಲ್ಲ ಎಣೆ.

ತನ್ನತನದೊಳಗೆ ಹಾದು
ಜೀವನವು ಹರದ ಕ್ಷಣ
ಕೇಳುವುದು ಸಂಗೀತ, ಆತ್ಮ ಘೋಷ;
ಆತ್ಮ ಕೊಳಲಿನ ಒಳಗೆ ಹರಿವ
ತನ್ನತನದ ಶ್ರುತಿ
ಎಲ್ಲ ಸಂಗೀತದ ಮೂಲ,
ಬದುಕು ಜಂಜಾಟದ ಮೂಲ,
ಜಾಲದೊಳಗೆ ಮೈ ಚೆಲ್ಲಿ ಬದುಕಬೇಕು,
ಸಿಹಿಕಹಿ ರಸವನ್ನನುಭವಿಸಬೇಕು;
ಎಲ್ಲರೊಳಗೊಂದಾಗಿ, ಎಲ್ಲರಿಂದ ಹೊರತಾಗಿ,
ಎಡಬಲವಾಲದೆ ನಿಂತು, ಆಸರೆಯ ಮೀರಿ
ಎದೆಯೆತ್ತಿ ನಡೆವುದೆ ಜೀವನದ ದಾರಿ.

Friday, April 29, 2016
Topic(s) of this poem: life
COMMENTS OF THE POEM
READ THIS POEM IN OTHER LANGUAGES
Close
Error Success