ಮೆರವಣಿಗೆ Poem by Praveen Kumar in Bhavana

ಮೆರವಣಿಗೆ

ಗದ್ದಲದ ಮೆರವಣಿಗೆ ಸಾಗುತ್ತಿದೆ ದಾರಿಯುದ್ದ,
ಕೇಳಿರಣ್ಣ, ಕಿವಿಗಚ್ಚುವ ಕೊಂಬು ಕಹಳೆ ಡೋಲು ಶಬ್ದ.

ಸಾಲುಗಳ ಮುರಿದು, ಸರದಿಗಳ ತೊರೆದು,
ಜನಜಾತ್ರೆ ನುಗ್ಗುತ್ತಿದೆ ಮುಂದೆ, ಹಿಂದೆ,
ಕುಣಿತಗಳು, ಪಟಾಕಿ ಮತಾಪುಗಳು ಸಿಡಿದು
ತಂದಿವೆ ಹುಚ್ಚು ಗದ್ದಲ ಕೋಲಾಹಲ ಸುತ್ತ.

ನೇತಗಳು ಮುಂದೆ, ಜನ ಮಂದೆ ಅವರ ಹಿಂದೆ,
ಕಣ್ಣು ಮುಚ್ಚಿ ನಡೆಯುತ್ತಿವೆ ಮುಂದೆ ಮುಂದೆ,
ಮನಸು ಸೆಳೆದತ್ತ, ಕಾಲು ಎಳೆದತ್ತ,
ಮೆರವಣಿಗೆ ಸಾಗುತ್ತಿದೆ, ಗುರಿ, ದಾರಿ, ಬುದ್ದಿ ಬದಿಗಿಟ್ಟು.

ಎಡಬಲ, ದಾರಿ ಸೀಮೆಗಳ ಪರಿವೆಯೆ ಇಲ್ಲ,
ಏರುತಗ್ಗು, ಸಮತಟ್ಟು, ತಡೆಗಳ ಗೊಡವೆ ಬೇಕಿಲ್ಲ,
ನೂರರಲಿ ಒಂದಾಗಿ, ಕೋಲಾಹಲದಲ್ಲಡಗಿ
ನಡೆವವರ ಸಂತೆ ಈ ನಿರ್ಜನ ಜನ ಕಂತೆ.

ಹೋದಷ್ಟು ಮುಗಿಯದ ದಾರಿ ಮುಂದೆ,
ಆದರೂ ದಣಿಯದೆ ಕಾಲನ್ನೆಳೆದು, ಎಳೆದು,
ನಡೆವ ಹುರುಪಿನ ವಿಸ್ಮಯವೀ ಮೆರವಣಿಗೆ,
ಇದು ವ್ಯಕ್ತಿ ಪ್ರಜ್ಞಗತೀತ ಗುಂಪು ಪ್ರಜ್ಞೆ.

ಯಾಕೀ ಮೆರವಣಿಗೆ, ಯಾವ ಮಸಣಕೆ ಪಯಣ,
ಎದುರಿಂದ ಕೊನೆಯವರೆಗೆ ಅಲ್ಲಿ ತಿಳಿದವರಿಲ್ಲ;
ಹೊರಟ ಗದ್ದಲದಲ್ಲಿ ಎಲ್ಲರೊಡನೊಂದಾಗಿ,
ತನ್ನನಡಗಿಸಿ ಮರೆತು ನಡೆಯುವುದು ಈ ಪಯಣ.

ಡೋಲುಗಳ ತಾಳ, ಕೊಂಬು ಕಹಳೆಗಳ ಮೇಳ,
ಜೊತೆಗೆ ಕಾಲ ತೂಕದ ಕಾಲುಗಳ ಹೆಜ್ಜೆ,
ಕಳೆದುದನ್ನು ಹಿಂದಿಕ್ಕಿ ನಡೆಸುತ್ತದೆ ಮುಂದೆ,
ಕಾಲು ದಣಿಯುವವರೆಗೆ, ಹೃದಯ ಒಡೆಯುವವರೆಗೆ.

Friday, April 29, 2016
Topic(s) of this poem: politics
COMMENTS OF THE POEM
READ THIS POEM IN OTHER LANGUAGES
Close
Error Success