ಕಲಿಯುಗ Poem by Praveen Kumar in Bhavana

ಕಲಿಯುಗ

ಕಲಿಯುಗವಿದು ಹೋರಾಟದ ಯುಗವು,
ಎದ್ದು ಬಿದ್ದೆದ್ದು ಈಜಾಡುವ ಯುಗವು;
ಸಮುದಾಯದ ಮಧ್ಯೆ ತಲೆಯನು ಮರೆಸಿ
ಸರಿಸಮಯಕೆ ಕಾದು, ಅವಮಾನವನೊರಸಿ
ಭುಜಗಳ ದಬ್ಬಿ, ಹಿಂದಕೆ ಸರಿಸಿ
ಹೇಗಾದರು ಮುಂದಕೆ ನುಸುಳುವ ಕಾಲ.

ರಾಡಿಯ ಒಳಗಿನ ಹುಳಗಳು ಎಲ್ಲ,
ಶೀತಲ ಮೈ, ಎಲುಬಿಲ್ಲದ ಮುದ್ದೆ,
ದಬ್ಬುವ ಗುಂಡಿಯ ಯಂತ್ರದ ಚಲನೆಯ,
ಬಿಸಿಲಲಿ ಮುರುಟುವ ದುರ್ಬುದ್ದಿಗಳು.

ತಾಮಸ, ಸತ್ವ, ನೀರು, ರಕ್ತ, ಮರಳು, ಉಪ್ಪು, ಒಂದೆ ಇಲ್ಲಿ
ಧೈರ್ಯ ಧಾಷ್ಟ್ಯ, ಪ್ರೀತಿ ಮೋಸ, ಬೆಳಕು ಸಂಜೆ ಎಲ್ಲ ಒಂದೆ,
ಮ್ಟುಯ ತುಂಬ ಬಾಚುವ ಸಂಚಿನ ಅಂತಿಮ ವಿಜಯದ ಈ ಕಾಲದಲ್ಲಿ
ಎಲ್ಲ ಮರೆತು, ಮುಂದಕೆ ನುಸುಳಿ, ಮೇಲಾಡುವವನು ಬಾಳಿಯಾನು,
ತೂಕವೆಂದು ಅಡಗುವವನು, ಭೂಮಿಯ ಒಳಗೆ ಹುದುಗುವ ಕಾಲ,
ಎದ್ದು ಬಿದ್ದು ಏರುವ ಹಠವು ಗದ್ದುಗೆಯನ್ನು ಏರುವ ಕಾಲ.

ಕಲಿಕಾಲದಲ್ಲಿಲ್ಲ ಭಾವನೆ, ಚಿಂತನೆ,
ಕಾಲಿಟ್ಟದೆ ಚಲನೆ, ಕಣ್ಣಿಟ್ಟದೆ ಕಲ್ಪನೆ,
ಜೀವದ ಭಾರದಿ ಬಂದುದೆ ಜೀವನ,
ಬದುಕಿದುದು ಬದುಕು, ಉಸಿರಾಟವೆ ಜೀವನ.

ಮೊಂಡು ಅಲಗಿನ ಕತ್ತಿಯ ವರಸೆಯ ತೋರುವ
ಕದನದ ಭೂಮಿ ಈ ಕಲಿಕಾಲ;
ಹೋರಾಟದ ಬಯಕೆ, ಗುರಿುಲ್ಲದ ಹೊಡೆತ,
ಪೆಟ್ಟು ತಪ್ಪಿಸಲೆಂದು ಹಾಕುವ ಪಟ್ಟು,
ತಿಂದರೆ ಹೊಡೆತ, ಧೂಳು ತಿನ್ನುತ ಬಿದ್ದು,
ಮರುವರಸೆಗೆ ತೊಡಗುವ ಮನಸಿನ ಕೆರೆತ.

ಕಲಿಯುಗವಲ್ಲ ಕಲಿಗಳ ಕಾಲ,
ರಂಗದಂಚಲಿ ನಿಂತು, ತಪ್ಪು ಹೆಜ್ಜೆಗೆ ಕಾದು,
ಒಳ ಹೆಜ್ಜೆಯನಿಡುವ ಸಂಚಿನ ಕಾಲ,
ದಿಟ್ಟರ ವಂಚಿಸಿ ಮೇಲೇಳುವ ಕಾಲ.

Friday, April 29, 2016
Topic(s) of this poem: life
COMMENTS OF THE POEM
READ THIS POEM IN OTHER LANGUAGES
Close
Error Success