ಸಖಭಾವ Poem by Praveen Kumar in Bhavana

ಸಖಭಾವ

ಹುಣ್ಣಿಮೆಯ ಚಂದ್ರಮನು ಮೂಡಲಲಿ ಬಂದಾಗ
ಆಶೆ ಕನಸಿನ ಭರತದಿ ಧರೆ ಸಂಪ್ಲವನಗೊಳುವಂತೆ,
ವೈಶಾಖದ ನಡುವಲ್ಲಿ ಮಳೆ ಧಾರಾಕಾರದಿ ಸುರಿದಾಗ
ತಂಪಿನ ಹೊಳೆಯಲಿ ಧರೆ ಸಂತೃಪ್ತಿ ಪಡೆಯುವಂತೆ,
ನೀನು ಬಳಿ ಬಂದಾಗ, ಎದೆ ಝಲ್ಲೆಂದು ಕುಣಿಯುವುದು,
ಆನಂದದ ಗುಂಗಿನಲಿ ಬಾ ಸಂಗೀತವಾಗುವೆನು.

ನೀನು ಇಲ್ಲಿಲ್ಲ, ಅಲ್ಲಿಲ್ಲ, ಒಳಗಿಲ್ಲ, ಹೊರಗಿಲ್ಲ,
ನನ್ನೊಳಗೆ ಮೈ ಮರೆತು ನನ್ನೊಡನೆ ಇರುವೆ;
ಏನೊಂದು ಸುಖಭಾವ, ಸಾನ್ನಿಧ್ಯದ ಹಿತ ಭಾವ,
ನಿನ್ನ ನಗು ಮುಖದಲ್ಲಿ ಎಂತಹ ಸುಖ ಮುದ್ರೆ!
ಹುದುಗಿ ನೋಡುವ ನಿನ್ನ ಆ ನೀಲ ತಪಸ್ವಿನಿ ನೇತ್ರ,
ಅರೆ ಬಿರಿದ ತುಟಿಯಿಂದ ಒಳದೊತ್ತಡದ ಬಿಸಿ ಉಸಿರು.

ಈ ಜೀವಂತ ಪ್ರೀತಿಯಲಿ ಮೈ ಮನಸು ಬೆರೆತಾಗ,
ರಂಗುರಂಗಿನ ವಿಪ್ಲವತೆ ತಾಳೆ ಮರದೆತ್ತರ ತೆರೆ ರಾಚಿ
ಕನಸು ಕಲ್ಪನೆ ತುಂಬ ಸುಖದ ಕಾಮನ ಬಿಲ್ಲನು ಬಾಚಿ,
ಉರುಳುರುಳಿ ಬಂದೆನ್ನ ನೆಲದಿಂದ ಮೇಲೆತ್ತಿ
ನಿನ್ನೊಡನೆ ನನ್ನನ್ನು ತೇಲಾಡಿಸಿತು ಆಕಾಶದಲಿ,
ಮೈ ಬಿಸಿಯೇರಿ ಸುಖಭಾವ ಮೇಲುಕ್ಕಿ ಬಂತು.

ಮೈ ಮೈ ತಗಲಿದಾಗ, ಮನಸು ಮನಸು ಅರಳಿ ಬಂತು,
ಪುಳಕಗೊಂಡ ಮೈ ಮನಸಲ್ಲಿ ಸೌಗಂಧದಲೆ ಹಬ್ಬಿ,
ಸುಖವಿದ್ಯುತ್ತು ಸುಳಿ ನಮ್ಮ ಮೈ ಮನಸು ಸುತ್ತಿ,
ಹೆಚ್ಚಿಸಿತು ಬಯಕೆ, ಬಾಯಾರಿದೆವು ಮತ್ತೆ, ಮತ್ತೆ,
ಮುಚ್ಚಿರುವ ಕಣ್ಣಲ್ಲಿ ನಿನ್ನ ನನ್ನ ಬಿಟ್ಟು ಬೇರೆ ಇಲ್ಲ,
ಇದು ನಮ್ಮ ಲೋಕ, ಸುಖ ಮಾದಕತೆಯ ಸ್ವರ್ಗ.

ಓ ಮಾಟಗಾತಿ, ನೀನಾವ ಅಸ್ತ್ರ ಬೀಸಿ,
ನಿನ್ನ ಕಟಿಯ ಸುತ್ತ ಕಟ್ಟಿ ನನ್ನ ಮುಗ್ಧಗೊಳಿಸಿ,
ರೇಷ್ಮೆಯಂತ ಮೋಡ ಮೆತ್ತೆಯ ಮೇಲೆ
ನನ್ನನಿಟ್ಟು ಹಾರುವೆಯೊ ಹೊಸ ಲೋಕದತ್ತ;
ನನಗೂ ಆಶೆ ರೆಕ್ಕೆ ಹುಟ್ಟಿ, ನೀನೆನಗೆ ಅಂತರಿಕ್ಷವಾಗಿ
ನಾ ನಿನ್ನ ಮೂಲೆ ಮೂಲೆ ಮುಟ್ಟಿ, ಸುತ್ತಾಡಿದೆ.
ನಿನ್ನಾಂತರ್ಯದಿಂದ ಲಾವಣ್ಯ ಚಿಗುರಿ,
ನಿನ್ನ ಚೆಲುವು ದೇಹಕಾಂತಿಯೊಡನೆ ಬೆರೆತು,
ನನ್ನಾಂತರ್ಯದಲ್ಲಿ ಮಹಾಪೂರವಾಗಿ ನೀನು,
ಗುಡಿಸಿ ಸಾರಿಸಿ ಹೃದಯ, ಮನಸು ಸ್ವಚ್ಛವಿಟ್ಟೆ;
ನನ್ನ ಮರುಭೂಮಿಯಲಿ, ನಿನ್ನ ರೂಪ ಹನಿದು ಹನಿದು
ಸವಿ ಜೇನು ಹೊಳೆಯಾಗಿ ಸಿಹಿಭಾವ ಹಬ್ಬಿದೆ.

Friday, April 29, 2016
Topic(s) of this poem: life
COMMENTS OF THE POEM
READ THIS POEM IN OTHER LANGUAGES
Close
Error Success