ರಾಜಕಾರಣಿಗಳು Poem by Praveen Kumar in Bhavana

ರಾಜಕಾರಣಿಗಳು

ರಾಜಕಾರಣಿಗಳು ಇವರು,
ನಮ್ಮ ನಿಮ್ಮನ್ನಾಳುವ ನಾಯಕರು;
ದಿನ ಬೆಳಗಾದರೆ ಬಿಸಿ ಭಾಷಣ ಬಿಗಿದು
ಹಂದಿ, ಕುರಿಮಂದೆ, ತೋಳಗಳ ಛೂ ಬಿಟ್ಟು
ಹೊಟ್ಟೆ ಹೊರೆಯುವ ಹೊಟ್ಟೆಬಾಕರು;
ಹಳ್ಳಿಯಲ್ಲಿ ಹೊಟ್ಟೆ, ಡಿಲ್ಲಿಯಲ್ಲಿ ಕಾಲು,
ತಲೆ ಹೃದಯ ನೋಡದ ಢೌಲು ಜನರು,
ನಮ್ಮ ನಿಮ್ಮ ದಾಳವನಾಡಿಸಿ ಇವರು
ಚದುರಂಗವಾಡಿ, ಜೀವವಳಿಸಿ, ಉಳಿಸಿ
ಜೇಬು ತುಂಬುವರು, ಅಧಿಪತ್ಯವೇರುವರು.

ರಾಜಕಾರಣಿಗಳು ಇವರು,
ನಮ್ಮ ನಿಮ್ಮನ್ನಾಳುವ ನಾಯಕರು;
ನಾವೆಲ್ಲ ಇವರ ದಡ್ಡ ಪುಕ್ಕಟೆ ಕಾಲಾಳುಗಳು,
ಬಂದ್ ಮಾಡುವ, ಘೋಷಣೆ ಕೂಗುವ ಚೀಲಗಳು,
ಕಾವೇರಿ, ಗೋಕಾಕ, ಹಿಂದಿ, ಹಿಂದುಯೆಂದು,
ರಕ್ತಕೊಟ್ಟು, ಗದೆಕೊಟ್ಟು, ತುಲಾಭಾರ ಮಾಡಿ,
ಎತ್ತಿ, ಹೊತ್ತು ಪರಾಕೆಂದು ವೋಟನ್ನು ಕೊಟ್ಟು,
ಬೆನ್ನು ತಿವಿದ ಮೋಡಿಗಾರರ ಪಟ್ಟಕ್ಕೆ ತರುವ
ಮೂಕರು ನಾವು, ದಡ್ಡ ಹೇಡಿ ಮೂಢ ಜನರು.

ರಾಜಕಾರಣಿಗಳು ಇವರು,
ನಮ್ಮ ನಿಮ್ಮನ್ನಾಳುವ ನಾಯಕರು,
ಜನನಾಯಕರು ಇವರು, ಜಿಗಣೆ ನಾಯಕರು,
ವೋಟು ಹೀರುವರು, ನಿಮ್ಮ ಹಕ್ಕು, ರಕ್ತ ಹೀರುವರು,
ತಾವಾದರೋ ಹೀರಿ ಹೀರಿ ಉಬ್ಬಿ ಬೆಳೆಯುವರು,
ಅಧಿಕಾರ ಮಾರಿ ಮಾರಿ ಹಬ್ಬಿ, ಕೊಬ್ಬಿ ಕೊಳೆಯುವರು;
ಬೇರಿಲ್ಲದ ಬರೆ ಕೊಂಬೆರೆಂಬೆಗಳು, ಬೇತಾಳಗಳು,
ಕಪ್ಪು ಮೋಡದಿಂದೆದ್ದು ಆಕಾಶವೇರುವವರು;
ಕೆಸರಿನ ಕೆಸರು ಕೊಚ್ಚಿ ಇವರು,
ಪುಂಡಾಟಿಕೆ ಅವ್ಯವಸ್ಥೆ ಕಡೆದು ಮೇಲೆದ್ದು
ಕಾನೂನು ಪರಿಪಾಲಿಸುವ ಮೋಜುಗಾರರಿವರು,
ದಂಗೆಯೆಬ್ಬಿಸುವರು, ಸರಕಾರ ರಚಿಸುವರು,
ಗುಂಪುಗಳನೆದುರು ಬಿಟ್ಟು ಜನನಾಯಕರಾಗುವರು,
ಜನಕಲ್ಯಾಣ ಸಾರುವರು, ಲೈಸೆನ್ಸ್ ಮಾರುವರು,
ಪಕ್ಷ ಪಕ್ಷವೆಂದುಕೊಂಡು, ಪಕ್ಷದಲ್ಲೇ ಇದ್ದುಕೊಂಡು
ಕಾಲು ಎಳೆದು, ಕುರ್ಚಿ ಸೆಳೆ ರಾಜಕೀಯ ಮಾಡುವರು,
ಹೊಂಚು ಹಾಕಿ, ಹೂಟ ಹೂಡಿ ಸ್ವಾರ್ಥಕ್ಕಾಗಿ ಹೊಡೆದಾಡುವರು;
ನಮ್ಮ ನಿಮ್ಮ ಜುಟ್ಟನಿವರು ತಮ್ಮ ಕೈಲಿ ಗಟ್ಟಿ ಹಿಡಿದು
ನಮ್ಮ ನಿಮ್ಮ ಬದುಕಿನಲ್ಲಿ ದಾರಿದೀಪವೆನ್ನುವರು.

ರಾಜಕಾರಣಿಗಳು ಇವರು,
ನಮ್ಮ ನಿಮ್ಮನ್ನಾಳುವ ನಾಯಕರು;
ಸರಿ ತಪ್ಪು ದಾರಿ ನಮಗೆ ತೋರಿಸುವ ಶಾಸಕರು,
ನ್ಯಾಯನ್ಯಾಯ ನೀತಿ ಮೀರಿ ಹಂಚಿಕೆ ನಡೆಸುವರು,
ಹೊಲಸಿನಲ್ಲಿ ಮೊಟ್ಟೆಯೊಡೆದು ಹೊಲಸು ನುಂಗಿ ಬದುಕುವ
ಹೊಲಸು ರೋಗರುಜಿನವನ್ನು ಹೊತ್ತು ದೂರ ಮೇಲೆ ಹಾರಿ
ನಾಡು ತುಂಬ ಹರಡುವ, ಮೈಗೆ ಕುಟುಕಿ ತುಂಬುವ
ಇವರು ರಕ್ತ ಪಿಪಾಸು ನುಸಿಹಿಂಡು,
ಅದೇ ಸಿಳ್ಳು, ಕಾಟ, ಹೇಸಿಗೆ ಹಾರಾಟ;
ಹಲವು ಹೆಡೆಯ ಹಾವುಗಳು;
ಬಾು ತುಂಬ ವಿಷದ ಹಲ್ಲು, ನೆತ್ತಿ ಮೇಲೆ ಮಾಣಿಕ್ಯ,
ಹೂವು ಮಾಲೆ, ದೊಡ್ಡ ಪಟ್ಟ, ಮೊದಲ ಪೂಜೆ, ಗೌರವ,
ಹಣ ಹಿಂಸೆ ಗಾಳ ಬೀಸಿ, ಪಾರುಪತ್ಯ ತಮ್ಮೊಳಗೆ ಹಂಚಿ
ಜನನಾಯಕತ್ವ ವಹಿಸಿ ವ್ಯವಹಾರ ನಡೆಸುವರು.

Friday, April 29, 2016
Topic(s) of this poem: political
COMMENTS OF THE POEM
READ THIS POEM IN OTHER LANGUAGES
Close
Error Success