ಬಳ್ಳಿಯ ಹಂದರ Poem by Praveen Kumar in Bhavana

ಬಳ್ಳಿಯ ಹಂದರ

ಚೆಲುವಿನ ಸುಂದರ ಹಂದರದಲ್ಲಿ
ಹಬ್ಬಿದ ಸುಂದರ ಬಳ್ಳಿಯು ನೀನು,
ಬಳ್ಳಿಯ ತಂಪಿನ ಆಸರೆಯಲ್ಲಿ
ದಣಿವನ್ನಾರಿಸೆ ಬಂದಿರುವೆ.

ಬಿಸಿಲಿನ ಅಬ್ಬರ ಹಬ್ಬಿರುವಲ್ಲಿ
ತೋಳಿನ ಮಧ್ಯೆ ತಂಪನು ಕೊಟ್ಟು,
ಬಳಲಿದ ಜೀವಕೆ ಚೇತನವಾಗಿ
ಹೊಸತನ ಹೊಸಸ್ತರ ತೋರಿಸು ನೀನು.

ಮೊಗ್ಗಿನ ಹೂವನು ಅರಳಿಸಿ ಬೇಗ,
ಯವ್ವನ ಸೌಗಂಧ ಹೊರಗೆ ಬಿಟ್ಟು,
ಹೊಸ ಹೊಸ ಬಣ್ಣದ ಅಲೆಗಳ ಮಧ್ಯೆ
ಸುಖ ಸಾಗರದ ನಿದ್ರೆಯ ನೀಡು.

ತಂಪಿನ ನಿನ್ನ ಕೈಗಳ ಚಾಚಿ,
ಬೆಚ್ಚನೆ ನಿನ್ನ ತುಟಿಗಳ ಬಿಚ್ಚಿ,
ಕಂಡರಿಯದ ಲೋಕದ ಕನಸನು ಕೊಟ್ಟು
ಹೊಸದಿನ ಹೊಸತನದುಬ್ಬರ ತಾ.

ನೋವಿನ ಮುಳ್ಳಿನ ಹಾಸಿಗೆ ಮೇಲೆ
ರಕ್ತದ ಧಾರೆ ಹರಿಸಿದ ನನಗೆ
ನಿನ್ನಮೃತ ಸ್ಪರ್ಷದ ಸುಖವನು ಕೊಟ್ಟು
ನೋವಿನ ದಿನಗಳ ಮರೆಸು ಬೇಗ.

ಬಳ್ಳಿಯ ಬಳಕುವ ಆಲಿಂಗನದೊಳಗೆ,
ಬಳ್ಳಿಯ ಬೆಚ್ಚನೆ ಉದ್ವೇಗದ ನಡುವೆ,
ಸಂಚಿತ ಭಾವ ಪ್ರವಹಿಸಿ ಹೊರಗೆ
ಬಳ್ಳಿಯ ತುಂಬ ಅರಳಲಿ ಹೂವು.

Monday, July 10, 2017
Topic(s) of this poem: life,love
COMMENTS OF THE POEM
READ THIS POEM IN OTHER LANGUAGES
Close
Error Success