ಬಾಂಧವ್ಯ Poem by PRAVEEN KUMAR Kannada Poems

ಬಾಂಧವ್ಯ

ಹಲವು ಬಾಗಿಲುಗಳ ಒಳಗೆ
ನೆನಪಿನ ಪದರುಗಳ ಕೆಳಗೆ
ಒಬ್ಬಂಟಿಯಾಗಿ ಕಾದಿರುವಳು.

ಬಣ್ಣಗಳ ಲೋಕದಲಿ
ಕಲ್ಪನೆಯ ಸಿಂಹಾಸನದಲಿ
ಒಬ್ಬಂಟಿ ಚೆಲುವೆ,
ಸತ್ಯಸತ್ಯತೆಯ ಭೇದ ಮರೆತು
ಕಾಲಾಂತರದ ಪ್ರಜ್ಞೆ ಮರೆತು
ಧೀರ್ಘ ಧ್ಯಾನ ಚಿಂತನೆಯ ಮಧ್ಯೆ,
ಸಹನೆ ಸಂಯಮ ತಪಸ್ಸಿನಲ್ಲಿ
ಯುಗ ಯುಗಾಂತರದಿ ಒಂಟಿ ಕಾದಿರುವಳು.

ಅದೊಂದು ದೊಡ್ಡ ಬೆಳಕು ಸೌಧ,
ನಡುವೆ ಶುಭ್ರ ದೀಪ ಅವಳು;
ಸೌಗಂಧ ಭರಿತ ತಂಬೆಲರು
ತೀಡಿ ಅವಳ ಮುದ್ದಿಕ್ಕುವಾಗ
ನೆನಸು ದ್ರವಿಸಿ ಕನಸು ಅಗಿ
ಈವಾಗ ಕರಗಿ ಆವಾಗವಾಗಿ
ಕಾಲನೆಲದ ಮೇರೆ ಮೀರಿ
ನಾ ಭಾವಾವೇಗವಾಗಿ ಬರುವೆ.

ರಾಮನನರಸುವ ಅಹಲ್ಯೆಯಾಗಿ,
ಕನ್ಯಾಕುಮಾರಿಯ ತಾಳ್ಮೆ ಸಹನೆಯಾಗಿ,
ಸ್ತಬ್ಧಗೊಂಡ ಶಿಲಾಬಾಲಿಕೆಯೆ ಆಗಿ,
ಋತು ನಿದ್ರೆ ಜೊಂಪಿನಲಿ
ಘನೀಭವಿಸಿದ ಭಾವಾವೇಗದಲ್ಲಿ
ಭವಿತವ್ಯ ಭೇಂಟಕ್ಕೆಂದು ಒಂಟಿ ಕಾದಿರುವಳು.

ನಾನಲ್ಲಿ ಇಳಿದ ಕ್ಷಣವೆ ಅಲ್ಲಿ
ಧನ ಋಣ ಸಂಪರ್ಕವಾಗಿ
ವಿದ್ಯುತ್ತು ಮಿಂಚು ಅಲ್ಲೆಲ್ಲ ಹಾರಿ
ಐಹಿಕಕ್ಕೆ ಬರುವಳವಳು.

ಹೊಳೆವ ಚಿನ್ನದ ದ್ರವದ ಮೇಲೆ,
ನೂರು ಸೂರ್ಯ ತೇಜಸ್ಸಿನಲ್ಲಿ
ನಮ್ಮೀ ಬಾಂಧವ್ಯ ದೋಣಿ ತೇಲಿ,
ಆ, ಈ ತಟದ ಮಧ್ಯೆ
ಭಾವ ಸೇತು ಬೆಸೆಯುವುದು.

ಕಾಲಗರ್ಭ ಗುಡಿಯ ಒಳಗೆ
ಪೂಜೆಗೊಳುವ ದೇವರವಳು,
ಭಾವ ನಂದಾದೀಪವುರಿಸಿ
ನೆನಪಿನಾರತಿಯನ್ನು ಬೆಳಗಿ
ಭೂತಕಾಲ ಪಳೆಯುಳಿದೆ ಮೇಲೆ
ದೇವರಾಗೆ ಕಾದಿರುವಳು.

ಗುಡಿಯ ಮಂದ ಬೆಳಕಿನಲ್ಲಿ
ಮೂಡಿದಂತ ದಿವ್ಯ ಚೆಲುವು;
ದಿವ್ಯ ಚೆಲುವಿನ ನಡುವೆ ನಿಂತ
ಅವಳ ನೋಡುವ ಸುಖವದೇನು!

ಪಹರೆ ಗೋಡೆ ಸಾಲು ಹಾರಿ,
ಅವಳ ಲೋಕ ಸೇರಬೇಕು,
ಹಲವು ತೆರೆ ಪರೆಯ ದಾಟಿ
ಅಲ್ಲಿ ನಾನು ತಲಪಬೇಕು;
ಕಾಲದಂತರ ಹಬ್ಬಿದಂತೆ
ಹೃದಯ ಬಾಗಿಲು ಮುಚ್ಚಿಕೊಂಡು
ಕಾಲಧೂಳಿ ಪದರಿನೊಳಗೆ
ಈ ಬಾಂಧವ್ಯ ಎಲ್ಲಿ ಜೀರ್ಣಿಸುವುದೆಂದು
ಹಗಲು ರಾತ್ರಿ ತುಡಿವುದೆನ್ನ ಹೃದಯ.

Tuesday, July 11, 2017
Topic(s) of this poem: life,love
COMMENTS OF THE POEM
READ THIS POEM IN OTHER LANGUAGES
Close
Error Success