ಹೊಳಪು ಮಾಸಿದಾಗ Poem by PRAVEEN KUMAR Kannada Poems

ಹೊಳಪು ಮಾಸಿದಾಗ

ಕಾಲ ಜಾರಿದ ಹಾಗೆ
ಹೊಳಪು ಮಾಸಿದ ಹಾಗೆ
ನೀನೊಳಗಿಂದ ಹೊಸದಾಗಿ ಮೇಲೇಳುವೆ,
ಬತ್ತಿದ ಕಾರಂಜಿಯಲಿ
ನೆನೆಪಿನೋಕುಳಿಯಾಗಿ
ಹೃದಯ ತುಂಬ ನೀನು ಹರಿದಾಡುವೆ;
ಜೀರ್ಣಿಸಿದ ದಿನಗಳಲಿ
ಹಳೆ ದಿನದ ಆಟಗಳು
ಸುಖದಿನದ ಭೇಂಟಗಳು
ಮತ್ತೆ ಮತ್ತೆ ಮೇಲೇಳುವುವು,
ಊರುಗೋಲು ನೀಡುವುವು.

ಅರೆ ಮುರಿದ ಕೈ ಕಾಲು,
ಜೋತು ಬಿದ್ದ ಈ ಬಾಳು,
ಹಂಗು ಹಿಂಗು ತಿಂದ ಜೀವ
ಒಗರಾಗಿ ಹೋಗಿದೆ;
ಅಭಯವಾಗಿ ಕೊಟ್ಟ ಕೈಯು
ತಿಂದು ತಿಂದು ಕೃತಘ್ನ ಕಡಿತ
ಮೈಯೆಲ್ಲ ಹುಣ್ಣು ಹುಚ್ಚಾಗಿ ಹಬ್ಬಿದೆ;
ನಿನ್ನ ನೆನಪೆಂಬ ಸೌಗಂಧ
ದೂರದಿಂದ ಸುಳಿದಾಗ
ನೋವಲ್ಲೂ ಆನಂದ ಮನತುಂಬ ನನಗೆ.

ನೀ ಬಯಸಿದ ಹೂ ಬೇಲಿ
ಉಕ್ಕಿನ ಕೋಟೆಯಾಗಿ
ಲೋಕದ ಒದೆತಕ್ಕೆ ಎದೆ ಕೊಟ್ಟು ನಿಂತಿದೆ,
ಆತಂಕವೆಂದು ತಿಳಿದ ಜನ
ತಲೆಮೆಟ್ಟಿ
ಗೋಡೆ ಹಾರುವರು,
ತಾತ್ಸಾರ ತೋರುವರು,
ಎದೆ ಮುಟ್ಟಿ ತಂದ ಹೂ ಕಾುಯನು
ನೆಲಕಿಕ್ಕಿ ತುಳಿಯುವರು.

ಬೇಡವಾದ ಹಾಲನ್ನ
ಬೇವಿಗಿಂತ ಕಹಿಯಂತೆ,
ಬಯಸಿ ಹುಡುಕಿ ಬಂದವಳು
ಬೆಲೆವೆಣ್ಣಿಗಿಂತ ಕೀಳು,
ಧಾರಾಳತೆ ಇರುವಾಗ
ಧಾರಣೆಯು ಬಲು ಅಗ್ಗ,
ನಿನ್ನ ಹೂವು ಸ್ವಾದಕ್ಕೆ
ಹೀಗಾುತಲ್ಲ?

ಹೊರಗೆ ಹೊಳಪು ಮಾಸಿದರೇನು,
ಒಳಗೆ ಇರುವುದು ಅದೆ ಸತ್ವ,
ನೀನೊಬ್ಬಳೆ ಬಲೆ ಈ ಸತ್ಯ,
ಈ ತಾತ್ಸಾರ ನೀನೊಲ್ಲೆ;
ಇದನು ಬಲ್ಲ ನನ್ನೊಳಗೆ
ಕಳೆದ ದಿನ ಕಳೆದುದಿಲ್ಲ,
ನಿನ್ನ ನೆನಪು, ನೆನಪು ಅಲ್ಲ,
ನೀನೆನ್ನ ಒಂದೆ ಜೀವ,
ನನ್ನ ಮೂಲ ಚೇತನ,
ನನ್ನ ಆತ್ಮ ಸ್ಪಂದನ.

Tuesday, July 11, 2017
Topic(s) of this poem: life,love
COMMENTS OF THE POEM
READ THIS POEM IN OTHER LANGUAGES
Close
Error Success