ನನ್ನಾತ್ಮ ಸೌರಭದ ಓ ಮಧುರ ಜೇನು,
ನನ್ನೆದೆ ಭಾವದೊತ್ತಡದ ಲಾವಣ್ಯ ನೀನು;
ನನ್ನಾತ್ಮಗಿಡಬಿಟ್ಟ ಬೇರು, ಹೂವು ನೀನು,
ನಿನ್ನಲ್ಲಿ ಹಬ್ಬಿರುವ ಹರಹಂದರ ನಾನು.
ನಿನ್ನ ಜತೆ ಕಲ್ಪನೆಗೆ ಪುಕ್ಕಗಳು ಮೂಡುವುವು,
ತಂಗಾಳಿ ಶೃಂಗಾರ ಸಂಗೀತ ಉಲಿಯುವುವು,
ಹೃದಯ ಹಂದರದಲ್ಲಿ ಹಚ್ಚಹಸುರಿನ ಹೊನಲು
ಹುಚ್ಚು ಹೊಳೆಯಾಗಿ ಹಬ್ಬಿ ಹರಿಯುವುವು,
ಆಕಾಶಗಂಗೆಯಲಿ ಹೊಸಲೋಕ ಸ್ಠೃಸುತ
ಕಕ್ಕುಲತೆ ಗಿಡಗಂಟಿ ಹೂವಾಗಿ ಅರಳುವುವು,
ಆಶೆ ತಂಬೆಲರಾಗಿ ದೇಹದಾಹವ ತೀಡಿ, ತೀಡಿ,
ನವಚೈತನ್ಯದ ಕಾರಂಜಿ ಹರಿಸುವುವು,
ಕಲ್ಪನೆಯ ಕುದುರೆಯಲಿ ಕಾವ್ಯಕಲಾಕೌಶಲ್ಯ
ದಿಗಂತದ ಮರೆುಂದ ಝರಿಯಾಗಿ ಹರಿಯುವುವು.
ವಿರಹ ಬೆಂಗಾಡಿನಲಿ ನಿನ್ನೊಲುಮೆ ನೆನಪು
ಸಿಹಿನೀರ ಹೊಳೆಯಾಗಿ ಭೋರ್ಗರಿಸಿ ಬರಲು,
ಕನಸಿನ ಬುಗ್ಗೆಗಳು ಹಿಗ್ಗಿಹಿಗ್ಗುತ ಬಂದು
ಮದಭರಿತ ಮೈಮನಕೆ ಸಿಹಿ ಮತ್ತು ಬಂತು;
ಬಾಳ ಕತ್ತಲೆಯಲ್ಲಿ ಬೆಳಕಾಗಿ ನೀನು
ಕಣ್ಣಿಟ್ಟಲ್ಲೆಲ್ಲ ರೂಪ, ಚೈತನ್ಯ ತರುವೆ,
ಬಾಳಯಂತ್ರದ ಮೂಲ ಚೈತನ್ಯವಾಗಿ
ವಿಕಾಸ ಪ್ರಕೃತಿಯಲ್ಲಿ ನವಶ್ರುತಿಯನಿಡುವೆ.
This poem has not been translated into any other language yet.
I would like to translate this poem