ಹುಟ್ಟು ಸಾವುಗಳು ಸುತ್ತುವ ಚಕ್ರಗಳು,
ದಿನರಾತ್ರಿ, ಸುಖದು: ಖ ಸಂಚತ್ಸರಗಳಂತೆ,
ಹುಟ್ಟು ಸಾವು, ದಿನರಾತ್ರಿ, ಸುಖದು: ಖಗಳಿಂದು
ಒಂದಾಗಿ ಹೇಗೆ ಯೋಗಗೊಂಡುವುನೋಡಿ,
ನಗಲೋ, ಅಳಲೋ ಗೊತ್ತಿಲ್ಲ ನನಗೆ,
ಹುಟ್ಟಿನ ಹರ್ಷ ಸಾವಿನ ನೋವಾಯಿತಲ್ಲ!
ಕತ್ತಲೆಯ ಕತ್ತರಿಸಿ ಬೆಳಕಿಲ್ಲಿ ಕಾಲಿಡುವಾಗ
ಕತ್ತಲಿನ ಪಾತಾಳ ಬಾಯಿಬಿಚ್ಚಿ ನಿಂತಿತ್ತು,
ಬೆಳಕಲಿ ತೊಯ್ದು ಬೆಳಕಾಗುತಿರುವಾಗ
ಕಾರಿರುಳು ಮೈ ಮನವ ತತ್ತರಿಸಿತು,
ಬೆಳಗಿನಿಬ್ಬನಿಯಲಿ ಮಿಂದು ಮಾಗಿದ್ದ ಸಿಹಿಜೀವ
ಕಣ್ಣುಕಚ್ಚುವ ಕುರುಡು ಕತ್ತಲಲಿ ದಿಕ್ಕೆಟ್ಟು
ಬೆಳಗಿನಿಬ್ಬನಿ ಬೆರೆತ ಕರ್ರನೆ ಕಣ್ಣೀರಿನ ಧಾರೆಯಲಿ
ಕಹಿಗೊಂಡು ಮುದುರುತಿತ್ತು.
ಹೊಸಪದದ ಹೊಸಜೀವ ಪಾಕಗೊಳ್ಳುತ್ತಿದೆ ನೋಡಿ,
ನಸುಕಿನ ನಶೆಯಲ್ಲಿ ಭ್ರಮೆಯ ಹೊಸಿಕೆಯನ್ನೆಳಿದು
ಜೀವ ಜೀವನದಿಂದೋಡುತ್ತಿದೆ ದೂರ;
ಕತ್ತಲೆಂದರೆ ಭಯ, ಬೆಳಕೆಂದರೆ ಮತ್ತೆ ಭಯ,
ಭಯ ವ್ಯೂಹದ ಮಧ್ಯೆ ತತ್ತರಿಸಿದೆ ಜೀವ;
ಕಪ್ಪು ಕಂದರಕ್ಕಿಳಿದ ಜೀವ ಮೇಲೇರುವಂತಿಲ್ಲ,
ಅಸಹಾಯಕತೆಯಿಂದ ಆಕಾಶ ನೋಡುತ್ತ,
ಕಪ್ಪು ಬಿಳಿ ಮೋಡಗಳ ಮೇಲಾಟದಲಿ ಲೋಕ
ಬಿರುಮಳೆಯ ಹೊಳೆಹರಿಸಿ ತಿಳಿಯಾಗಿ ನಿಲುವಂತೆ
ಫಲಾಫಲ ಮರೆತು ಬೈರಾಗಿಯಾಗಿರುವೆ,
ನಿರಾಸಕ್ತಿಯಲಿ ನಾ ನಗ್ನನಾಗಿರುವೆ.
This poem has not been translated into any other language yet.
I would like to translate this poem