ಹೂವು ಅರಳಿದೆ, ಚೆಲುವು ಚಿಗುರಿದೆ,
ಸುಗಂಧ ತುಂಬಿದೆ, ಸಿಹಿ ಮತ್ತು ಹರಡಿದೆ;
ಹೃದಯ ಬಡಿತ ನಿಯತ ಹದನ ಮರೆತು
ಆನಂದದಿಂದ ಸ್ವಚ್ಛಂದ ನೃತ್ಯ ಮಾಡಿದೆ.
ಬಣ್ಣವೇರಿದ ಕನಸು ಸೂಸುವ ಮೈಯು
ಅಮೃತಧಾರೆ ಚೆಲ್ಲಿದೆ, ಸುತ್ತ ದೂರ ದೂರ;
ಬಯಕೆ ಕರೆದಿದೆ, ಮನಸು ಕನಿದಿದೆ,
ತಿಳಿಯದಾತುರ ದಾಹ ದೇಹ ದಹಿಸಿದೆ.
ಅಂಗಾಂಗ ವಾದ್ಯಗಳ ಸಂಗಮ ಸಂಗೀತ
ಸುಳಿಸುಳಿಯಾಗಿ ಬಿಚ್ಚಿ ಹರಿದು ಬರುತ್ತಿದೆ;
ಅಂತರಂಗವ ತೊಳೆದು, ಸ್ಫಟಿಕದಂತಿರಿಸಿ,
ಮಹದಾನಂದದ ಹೊಳೆುಂದ ಮೇಲೆತ್ತಿದೆ
ಎಳೆಯ ನಿನ್ನಿನ ಮೊಗ್ಗು, ಕೌಮಾರ್ಯ ಬಿಚ್ಚಿ
ಬಣ್ಣ ಸುಗಂಧಗಳಾವೇಶದ ಕಾದಾಟ ನಡೆಸಿದೆ;
ಮಂಕು ಕವಿದಂತಿದ್ದ ಗಾಳಿ, ಗಗನ, ಲೋಕ
ಹುರುಪಿನ ಬುಗ್ಗೆಯ ಹಬ್ಬಿ ಹೊಸರೂಪ ತಳೆದಿದೆ.
ಕಾಮನ ಕಣ್ಣು ತೆರೆದಿದೆ, ಬಿಗಿಯೌವನ ಚಿಮ್ಮಿದೆ,
ಜೀವನ ಲಾಸ್ಯ, ಲಾಲಿತ್ಯ, ಲಾವಣ್ಯ ಹೊರ ಹಬ್ಬಿದೆ;
ಅಂತರ್ಯದ ಸೌಂದರ್ಯ ನಿರೋಧ ಹರಿದೊಗೆದು
ಪೂರ್ಣವರಳಿದೆ, ಅಂಗಾಂಗ ತುಂಬಿ ನಿಂತಿದೆ.
ಸಾವಿರ ಬಳೆಕೈಗಳು ಬಳಿ ಬಾಯೆಂದು ಕರೆದಿವೆ,
ಬಯಕೆ ಬಳ್ಳಿಯ ಮಿಂಚು ಕಿಡಿಯಾಗಿ ಕಣ್ಣಿಂದ
ಹೊರವುಕ್ಕಿ ಹರಿದು ಸಾವಿರ ಹೃದಯ ಹಿಡಿಯುತ್ತ,
ಸಮಾಗಮ ಸಂತಸದ ಭರವಸೆಯ ತುಂಬುತ್ತಿವೆ.
ನೇರ ಸಮತಲದಲ್ಲಿ ಉಬ್ಬು ತಗ್ಗುಗಳು ಮೂಡಿ,
ರಸಗೋಪ್ಯಗಳ ಗಂಟು ಗೆಲ್ಲುಗೆಲ್ಲಲಿ ಕೊನರಿ
ಪ್ರಕೃತಿ ಕೃತಿ ಚಾತುರ್ಯ ಪ್ರಕಟಗೊಂಡಿದೆ ಹೇಗೆ!
ಹೊಸ ಜೀವ, ಹೊಸ ಭಾವ ಮೂಡುತ್ತವೆ ಹಾಗೆ.
ತಿಳಿಯಲಾಗದ ಸ್ವಾದ, ದೈವೀಯ ನಾದ
ಸುತ್ತಿ ಬರುತ್ತಿವೆ ನೋಡಿ ಗುಂಪು ಕೂಡಿ;
ಚಿಮ್ಮುವುವು ಬೆಚ್ಚನೆಯ ಹರ್ಷ ಕಾರಂಜಿ,
ಹುರುಪು ಬತ್ತಿದ ಶೀತಲ ಹೃದಯ ತುಂಬ.
ಮೌನವ್ಯೂಹದ ಮಧ್ಯೆ ಗೆಜ್ಜೆ ಸದ್ದು ಕೇಳಿ,
ನವರಸಗಳವ್ಯಕ್ತ ಜೀವಂತ ಮೂರ್ತಿ,
ಲವಲವಿಕೆ ತೋರಿ ಬರುತ್ತಿದೆ ಮೂಡಿ,
ಹೃದಯ ಗೂಡನು ಸೇರುತ್ತದೆ ಕಾಡಿಬೇಡಿ.
ಹೂವು ಅರಳಿದೆ, ಹೃದಯ ಚಿಗುರಿದೆ,
ಪ್ರೇಮ ಪ್ರೀತಿಧಾರೆ ದಡ ಮೀರಿ ಹರಿದಿದೆ;
ಸುಗಂಧ ತುಂಬಿದೆ, ಸಾನ್ನಿಧ್ಯ ಬಯಸಿದೆ,
ಹೃದಯ ಹೃದಯ ಸಮಾಗಮಕ್ಕಾಗಿ ನಿಂತಿದೆ.
This poem has not been translated into any other language yet.
I would like to translate this poem