ಪುಣ್ಯ ಸಮಾಗಮ Poem by PRAVEEN KUMAR Kannada Poems

ಪುಣ್ಯ ಸಮಾಗಮ

ನಾ ನಿನ್ನ ನೋಡಿದಾಗ, ನೀನೆನ್ನ ಬಳಿ ಬಂದಾಗ,
ನೀನಾರೆಂಬ ಪರಿಜ್ಞಾನ ಕೊಂಚವೂ ನನ್ನಲ್ಲಿರಲಿಲ್ಲ;
ನೀನಾರೋ ಅವರಿವರೆಂಬಂತೆ ಬರೆ ಹೆಣ್ಣು,
ದಾರಿಯಲ್ಲಡರುವ ಆಕಸ್ಮಿಕಗಳಲ್ಲೊಂದುಯೆಂದು
ಕಣ್ಣು ಹರಿಸಿ, ಸರಿಸಿ, ಮುಂದೆ ನಡೆದದ್ದುಂಟು;
ದಾರಿಗುಂಟ ನೀನು ಆವರ್ತಿಸಿ ಎದುರಾದಾಗ ಮಾತ್ರ,
ನಡೆದಂತೆನೆ ಬೆನ್ನಹಿಂದೆನೆ ನೀನು ನೆರಳಾಗಿ ನನ್ನ,
ತಿಳಿಯದಾಸರೆ, ಬೆಂಗಾವಲಾಗಿ ಬರುವುದನು ಕಂಡು
ತಿರುಗಿ ಹಿಂದೆ, ಮುಖಾಮುಖಿಯಾಗಿ, ನಸು ನಕ್ಕಿದ್ದೆ,
ನೀನಾರೆಲ್ಲಿಂದ ಬಂದೆ, ಮುಂದಕ್ಕೆಲ್ಲಿ ನಿನ್ನ ಪಯಣ,
ಹಾದಿ ದಿಕ್ಕಿನ ಗೊಡವೆ ಕಿಂಚಿತ್ತೂ ನನಗಿರಲಿಲ್ಲ;
ಮುಳ್ಳು ಕಲ್ಲಿನ ನಡುವೆ ನನ್ನನನುಸರಿಸಿದ ನೀನು,
ನನ್ನ ಕಂಡಾಕ್ಷಣ ನಾಚಿ ಕರಗಿ ತಲೆ ತಗ್ಗಿಸಿದ್ದೆ,
ತಕ್ಷಣ ತಿರುಗಿ ಹಿಂದೆ, ನೀನು ನನ್ನಿಂದ ದೂರ ಓಡಿದ್ದೆ;
ತಬ್ಬಿಬ್ಬಾದ ನಾನು ಬಿಡದೆ ನಿನ್ನ ಹಿಂದೆ ಹಿಂದೆ ಓಡಿ,
ನಮ್ಮಂತರ ಕ್ರಮಿಸಲಾಗದೆ ಸೋತು ನಿಂತಾಗ,
ದೂರ ದಿಗಂತದಾಚೆ ನೀ ಮರೆಯಾದುದನು ಕಂಡೆ,
ಯಾರಿವಳು ಅಪ್ಸರೆ, ದೇವಿ ನನಗೆದುರಾದವಳೆಂದು,
ಯಾವ ಮಹೋತ್ತರ ಸಾಧನೆಗಾಗಿ ಬಳಿ ಬಂದಳೆಂದು,
ಮತ್ತೇಕೆ ಹೀಗೆ ಮರೆಯಾದಳೆಂದು ಅಚ್ಚರಿಗೊಂಡೆ.

ನಿಂತಲ್ಲಿಂದ ನಿನ್ನ ಬಿಟ್ಟು ನಾನು ಕದಲಲಿಲ್ಲ,
ಹೋದವಳು ಮತ್ತೆ ನೀನು ಬಳಿಗೆನೆ ಬರಲಿಲ್ಲ;
ದಿಗಂತದತ್ತ ಬೊಟ್ಟಿಟ್ಟ ಕಣ್ಣು ಮಂಜಾಗುತ್ತಿದೆ ಈಗ,
ಮೋಡಗಳಾಟ ಬಿಟ್ಟರೆ ಕಣ್ಣಿಗೆ ಮತ್ತೇನೂ ಕಾಣುತ್ತಿಲ್ಲ;
ವರ್ಷಗಳನೇಕ ಕಾದು ಕಾಲು ಸೋಲುತ್ತಿದೆ ಈಗ,
ಕಾದು ಕಾದು ದೇಹ ಝರ್ಝರಿತವಾಗುತ್ತಿದೆ ನೋಡು;
ಆದರೆ ನಿನ್ನ ಸುಳಿವು, ನೀನಾರೆಂಬುವುದರ ಜಾಡು,
ಮತ್ತೆ ಹಿಂದೆ ಬರುವಿಯೋ ಎನ್ನುವುದರ ಅರಿವು,
ತಿಳುವಳಿಕೆ ನನಗಿನ್ನೂ ಈಗ ಕಿಂಚಿತ್ತೂ ಇಲ್ಲ;
ಅದಾವುದೋ ನಮ್ಮ ಜನ್ಮಾಂತರದ ಬಂಧವೋ,
ಕಾಲವಳಿದರೂ ಬಿಡದ ಪುಣ್ಯ ಪುಣ್ಯ ಸಂಬಂಧವೋ
ನಿನ್ನ ನನ್ನ ಹೀಗೆ ಕಾಲಮಿತಿ ಮೀರಿ ಬಂಧಿಸಿದೆಯೋ? -
ಕಾಲಗುಂಟ ನಡೆಯುತಿದ್ದ ನನ್ನ ನೀನೇಕೆ ಎದುರಾಗಬೇಕು?
ಬಿಡದೆ ನೆರಳಾಗಿ ಬಂದು ನನ್ನ ಗಮನ ಸೆಳೆಯಬೇಕು?
ನಾನಾದರೋ ಹಿಂತಿರುಗಿ, ನಿನ್ನಷ್ಟು ದೂರವನು ಕ್ರಮಿಸಿ,
ಕೈಲಾಗದೆ ಕಾಲು ಸೋತು ನಿಂತು ನಿನ್ನ ಕಾಯಬೇಕು?
ಕಾಲ ಪರಿವೆಯ ಮರೆತು, ನಿನ್ನೊಂದೆ ನೆನಪಿನಲಿ
ಜೀವ ಜೀವನವನ್ನೇಕೆ ನಿನಗೆ ಮುಡಿಪಾಗಿಡಬೇಕು?
ದಿಗಂತದಾಚೆ ನೀನಿಂತು, ಗೊತ್ತು, ನನ್ನ ಕಾಯುತ್ತಿರುವೆ,
ನಮ್ಮ ಆ ಪುಣ್ಯ ಸಮಾಗಮದ ದಿನ ಬರುವುದೆಂದೋ?

Friday, July 14, 2017
Topic(s) of this poem: life,love
COMMENTS OF THE POEM
READ THIS POEM IN OTHER LANGUAGES
Close
Error Success