ಇಲ್ಲಿ ಎಲ್ಲವೂ ಒಂದೆ Poem by Praveen Kumar in Bhavana

ಇಲ್ಲಿ ಎಲ್ಲವೂ ಒಂದೆ

ಆ ಲೋಕ, ಈ ಲೋಕ, ತಾರತಮ್ಯವೇಕೆ?
ಆ ಕಾಲ, ಈ ಕಾಲ, ಬೇಧಭಾವಯೇಕೆ?
ಈ ಲೋಕವೆಲ್ಲ ಒಂದೆ, ಈ ಕಾಲವೆಲ್ಲ ಒಂದೆ,
ಈ ತಾರತಮ್ಯ ಬೇಧಭಾವ ಅಜ್ಞಾನದ ಹುಟ್ಟು;
ಗಡಿಗಳ ಹಾಕಿ, ಗೋಡೆಗಳ ಕಟ್ಟುವ ಹ್ರಸ್ವ ಸ್ವಭಾವ,
ನಾನು ನೀನು ಅವನು ಇವನೆಂಬ ಬಾಲಪ್ರವೃತ್ತಿ.

ಇಲ್ಲಿ ಒಂದೆಂದರೆ ಹಲವು, ಹಲವೆಂದರೆ ಒಂದು,
ಇದು ಎಂದರೆ ಅದು, ಮತ್ತು ಅದು ಎಂದರೆ ಇದು,
ಇಂದು, ನಿನ್ನೆ, ನಾಳೆಗಳು ಒಂದಾಗಿ ನಡೆಯುವುವು,
ಬೇಧಭಾವ ತಾರತಮ್ಯ ಮನಸಿನ ಭ್ರಾಂತಿ;
ಒಂದರಲ್ಲೇ ಹುಟ್ಟಿ ಒಂದಕ್ಕೆ ಮರಳುವ ನಾವು
ಒಂದಾಗಿ ಬಾಳಿದರೆನೆ ಸರ್ವತ್ರ ಶಾಂತಿ ಸಮಾಧಾನ.

ಇಲ್ಲಿರುವುದೆಲ್ಲ ನಿನ್ನೆ ನಾಳೆಗೆ, ಅವನಿಗಿವನಿಗೆಂದಲ್ಲ,
ಎಲ್ಲರಿಗೆ ಎಲ್ಲ ಕಾಲಕ್ಕೆ ಮುಡುಪಿರುವ ಹಕ್ಕು,
ಬಲಾಬಲವಲ್ಲ, ಎಲ್ಲರ ಅಗತ್ಯಗನುಗುಣ ಹಂಚಿ,
ಎಲ್ಲರೂ ಸಮನಾಗಿ ನಡೆಯುವುದೆ ಬಾಳುವುದರ ಗುಟ್ಟು;
ಅಲ್ಲಿ ಹೆಚ್ಚು, ಇಲ್ಲಿ ಕಡಮೆ, ಅಸಮತೋಲನದಿಂದ
ಅಸಮಾಧಾನ, ಅಶಾಂತಿ, ಕ್ರಾಂತಿ, ಹಿಂಸೆ ತಪ್ಪುವಂತಿಲ್ಲ.

ಇರುವಲ್ಲಿಂದ ಇರದೆಡೆಗೆ ಹರಿಯುವುದು ಪ್ರಕ್ರತಿ ನಿಯಮ,
ಕೊಟ್ಟು ಪಡೆಯುವುದು ಸಮತೋಲನತೆಯ ಒಂದು ಅಂಗ;
ನೀನು, ನಾನು, ನಿನ್ನೆ, ನಾಳೆಯ ಗಡಿಗಳ ದಾಟಿ,
ಕೊಟ್ಟು ಪಡೆದು ಹಂಚಿ ಬಾಳಿದರೆ ಅದೇ ಸತ್ಯ;
ವಿಶಾಲ ವಿಶ್ವದ ಮಧ್ಯೆ ಒಟ್ಟಾಗಿ ಮೂಡಿದ ನಾವು
ಅಡಿಗಡಿಗೆ ಗಡಿಕಡೆದು ತುಂಡುತುಂಡಾಗಿ ಬಾಳಬೇಕೆ?

ಅದು ಇದರಲ್ಲಿ ಬೇಧವಿಲ್ಲ, ನಿನ್ನೆ ನಾಳೆ ಬೇರೆಬೇರೆಯಲ್ಲ,
ಒಂದೆ ಬೇರಿಂದ ಮೂಡಿಬಂದ ಕೊನರುಗಳು ಹಲವು;
ಅದೇ ನೀರುಗಾಳಿಯ ಬಲದಿಂದ ಅರಳುವ ನಾವು
ಬೇರೆ ಬೇರೆ ಹೋಳಾದರೆ ಕಮರದೆ ಬೇರೆ ದಾರಿಯಿಲ್ಲ;
ಒಟ್ಟಾಗಿ ಜಿಗಿಯುವ ಬುಗ್ಗೆ ಆಕಾಶ ಮುಟ್ಟುವ ಬದಲು,
ಕಚ್ಚಾಡಿ ಹೋರಾಡಿ ಕಾಲೆಳೆದು ಬತ್ತಿ ಹೋಗಬೇಕೆ?

ಇಲ್ಲಿ ಎಲ್ಲವೂ ಒಂದೆ, ಮುಂದಿರುವ ಗುರಿಯು ಒಂದೆ,
ಒಟ್ಟಾಗಿ ಎಳೆದರೆನೆ ಹೋಗುವುದು ಗಾಡಿ ಮುಂದೆ;
ನಾನು ನೀನು ಅವನು ಇವನು ನಿನ್ನೆ ನಾಳೆ ಕಚ್ಚಾಟ
ನಮ್ಮ ನಿಮ್ಮನ್ನೆ ದಿಕ್ಕುದಿಕ್ಕಿಗೆ ಹರಿಯುವ ಹುಚ್ಚಾಟ;
ಬಂದಂತೆ ನಡೆದು, ಕೈಕೈ ಹಿಡಿದು ನಡೆದರೆನೆ,
ಒಂದಾಗಿ ಬಾಳಿದರೆನೆ ಸರ್ವತ್ರ ಶಾಂತಿ ಸಮಾಧಾನ.

Saturday, July 15, 2017
Topic(s) of this poem: life,philosophy
COMMENTS OF THE POEM
READ THIS POEM IN OTHER LANGUAGES
Close
Error Success