ಜೀವ-ಜೀವನ Poem by PRAVEEN KUMAR Kannada Poems

ಜೀವ-ಜೀವನ

ಯಾಕೀ ಕಲಹ, ಕೋಲಾಹಲ,
ಯಾಕೀ ಸ್ವಾರ್ಥ ಹಾಲಾಹಲ,
ಯಾಕೀ ದ್ವೇಶ ಹಠಸಾಧನೆ;
ಯಾರೂ ಕೊಂಡುಹೋದವರಿಲ್ಲ,
ಕೂಡಿಟ್ಟದ್ದನ್ನು ಅನುಭವಿಸಿದವರಿಲ್ಲ,
ತಂದದ್ದಷ್ಟೇ ನಮ್ಮನಮ್ಮದು;
ಜೋಳಿಗೆ ತುಂಬ ತಂದದ್ದನ್ನು
ಬೇರಾರೂ ಕದಿಯುವಂತಿಲ್ಲ;
ಇದೀ ಲೋಕದ ನಿಯಮವಿರುವಾಗ
ಈ ಒದ್ದಾಟ ಆತಂಕವೇಕೆ?
ಶಾಂತ ಜೀವನವನ್ನು ಕದಡಬೇಕೆ?

ಒಬ್ಬೊಬ್ಬರದ್ದೂ ಒಂದೊಂದು ಹುರುಡು,
ಒಂದೊಂದು ಗುರಿ ಪೈಪೋಟಿ ಹೋರಾಟ,
ಗುರಿ ಮೀರಿದುದೆಲ್ಲ ಬರೆ ಕುರುಡು;
ಹೋರಾಟವೆ ಜೀವನದ ರೈಲುಕಂಬಿ?
ಈ ರೈಲುಕಂಬಿಯ ಕೊನೆ ನಿಲ್ದಾಣವೆಲ್ಲಿ?
ಗಣನೆ ಮೀರಿದ ದೈತ್ಯ ಕಪ್ಪುರಂಧ್ರ ತಾನೆ?
ಎಲ್ಲ ಒಳ ಸೆಳೆಯುವ ನಿರ್ವರ್ಣ ಕಪ್ಪು ತಾನೆ?
ಕಪ್ಪಿಂದ ಹೊರಟು ಕಪ್ಪು ಸೇರುವ ಜೀವ
ಅರ್ಧಂಬರ್ಧ ಜೀವನ ನಾಟಕದಲ್ಲಿ
ಸಹಜ ಶಾಂತತೆ ಬಿಟ್ಟು ಯಾತನೆಯಲ್ಲಿ ಸುಟ್ಟು
ತನ್ನನ್ನು ತಾನು ವಿರೂಪಗೊಳಿಸಬೇಕೆ?

ದೀರ್ಘತಿದೀರ್ಘ ವರ್ಣಪಟಲದ ಮೇಲೆ,
ಜೀವನ ಬರೇ ಅತ್ಯಲ್ಪ ಪುಟ್ಟ ಪಟ್ಟಿ;
ಬಂದವಕಾಶ ಅನುಭವಿಸುವುದ ಬಿಟ್ಟು
ಪ್ರಕೃತಿಯ ಸಹಜ ದತ್ತಿ ಬಿಟ್ಟುಕೊಟ್ಟು,
ಅತೃಪ್ತಿ ಸಿಟ್ಟು ದ್ವೇಷದಪಕ್ವ ಜಂಜಾಟದಲ್ಲಿ
ಬಿದ್ದೆದ್ದು ಬಿದ್ದು ಘಾಸಿಗೊಳ್ಳುವುದು ಸರಿಯೆ?
ಈ ಬೆಂಕಿಯಲಿ ಬೆಂದು ಪಕ್ವಗೊಂಡವರಿಲ್ಲ,
ಈ ಬೇಗೆಯಲಿ ಸುಟ್ಟು ಪುಟಗೊಂಡವರಿಲ್ಲ;
ಜೀವನದ ಹಾರಾಟ ಹೋರಾಟ ಕೃತ್ರಿಮ ಕ್ರಿಯೆ
ಪೂರ್ವೋತ್ತರಗಳಿಲ್ಲದ ಬಂಜರು ಬೀಳು ಭೂಮಿ;
ಅಕ್ಷುಬ್ಧ ಸೌಮ್ಯ ಯಾನ ಯೋಗ್ಯ ಪ್ರಸ್ಥಾನ.

ಕತ್ತಲೆಯಲ್ಲೆ ಹುಟ್ಟಿ ಕತ್ತಲೆಯಲ್ಲೆ ಇರುವ
ಕತ್ತಲಿನ ಜೀವಕ್ಕೆ ಬೆಳಕು ಒಂದು ಭಾಗ್ಯ,
ಕತ್ತಲಾಕಾಶದ ಮಧ್ಯದ ಕ್ಷಣಿಕ ಮಿಂಚು,
ಬೆಳಕಲ್ಲಿ ಮೂಡಿದ ಕ್ಷಣಿಕ ಛಾಯಾ ಚಿತ್ರ,
ಬೆಳಕಲ್ಲುಳಿಯುವ ಏಕೈಕ ಜೀವಮುದ್ರೆ,
ನಿದ್ರೆಯ ಮಧ್ಯೆ ಮೊಳೆತ ಸುಖದ ಕನಸು;
ಕಂಡ ಕನಸಲ್ಲೆ ಜೀವ ಸುಖ ಕಾಣಬೇಕು,
ಜೀವ ಜೀವನದ ಸ್ಪಷ್ಟ ಮುದ್ರೆ ಒತ್ತಬೇಕು;
ಪ್ರಕೃತಿ ದತ್ತ ಪ್ರಶಾಂತತೆಯ ಎಲ್ಲೆ ಮೀರಿ
ಕಲಹ ಕೋಲಾಹಲದ ವ್ಯೂಹದಲಿ ಬಿದ್ದೆದ್ದು
ಜೀವ ಜೀವನವ ದುಃಖ ನರಕ ಮಾಡಬೇಕೆ?

Wednesday, July 26, 2017
Topic(s) of this poem: life
COMMENTS OF THE POEM
READ THIS POEM IN OTHER LANGUAGES
Close
Error Success