ಅಪರಾವತಾರ Poem by Praveen Kumar in Divya Belaku

ಅಪರಾವತಾರ

ನಿನ್ನ ಅಪರಾವತಾರ
ನನ್ನ ಗೌಣ ಕಣ್ಣಿಗೆ ಮಿಗಿಲು,
ನಿನ್ನ ನಡವಳಿಕೆಯಿಂದ
ನನಗೇನೋ ತಿಳಿಯದ ದಿಗಿಲು;
ಹೊಸಲು ದಾಟಿದ ನೀನು
ಮತ್ತೆ ಬರಲಾರೆಯೆಂದು
ನಮ್ಮ ನಡುವಿನ ತಂತಿ
ಕಡಿದಿದ್ದೆ ನಾನು;
ಕಂಡಕಂಡಲ್ಲೆಲ್ಲ
ನಿನ್ನ ನೆನಪಿನ ಪುಟಗಳ
ಹರಿದೊಗೆದುದೆಷ್ಟೋ!
ಕತ್ತಲಡರಿ ಬೆಳಕು ಹರಿದಾಗ,
ನಿಜವು ಆಕಾಶ ಮೀರಿ ನಿಂತಾಗ
ನಾನು ನಾನಾಗಲಿಲ್ಲವೆಂದು
ಪಶ್ಚತ್ತಾಪದಿ ತುಂಬು ಪರಿತಪಿಸಿದ್ದೆ.

ರೆಕ್ಕೆಪುಕ್ಕಗಳ ಕಿತ್ತೊಗೆದ ನಾನು
ರೆಕ್ಕೆ ಬಿಚ್ಚಿ ಮತ್ತೆ ಹಾರುವಂತಿಲ್ಲ,
ನಿನ್ನೊಡನೆ ಸಂಗಾತ ನಡೆಸುವಂತಿಲ್ಲ,
ಚುಂಚುಚುಂಚುವನಿಟ್ಟು ಮುತ್ತಿಡುವಂತಿಲ್ಲ.

ಹೊಸಲು ದಾಟಿದ ನಿನ್ನ
ಇಂಗಿತ ನೀನು ತಲಪಿದ್ದೆ,
ಇದ್ದದನೆಲ್ಲ ಬಲಿಕೊಟ್ಟು
ನನ್ನ ಜೋಪಾನಗೊಳಿಸಿದ್ದೆ;
ಇದು ತಿಳಿಯುವ ಹೊತ್ತು
ನಾನೆಲ್ಲ ಒಗೆದು ಮುಗಿಸಿದ್ದೆ,
ಇನ್ನೇನೆಂದುಕೊಂಡು ದಿಗಿಲುಗೊಂಡಿದ್ದೆ.

ನೀನೇನೋ ಎಲ್ಲ ಬಲಿಕೊಟ್ಟು
ನಿರ್ಜೀವ ಜೀವನದಲ್ಲಿ
ದಿನದಿನ ನೂಕುತ್ತಿರುವೆ,
ನಾನೋ ನಿನ್ನ ಬಳಿ ಬರದಂತೆ
ಸುತ್ತು ಕೋಟೆ ನಿರ್ಮಿಸಿರುವೆ;
ನಿನ್ನನ್ನು ನಿನಗೆನೆ ಬಿಟ್ಟು,
ಮತ್ತೆ ಸ್ಥಿರತೆ ಕುಂದದಂತೆ
ದೂರದೂರದಿಂದಲೆ ನಿನ್ನ
ಕ್ಷೇಮ ಬಯಸುತ ನಾನು
ಇರುವುದೊಂದೆ ಮುಂದಿನ ದಾರಿ.

Monday, October 23, 2017
Topic(s) of this poem: life,love
COMMENTS OF THE POEM
READ THIS POEM IN OTHER LANGUAGES
Close
Error Success