ನಾವು ಸೃಷ್ಠಿ ಬೇರೆಯಲ್ಲ Poem by PRAVEEN KUMAR Kannada Poems

ನಾವು ಸೃಷ್ಠಿ ಬೇರೆಯಲ್ಲ

ನಾನು ಹುಳವು, ನಾನು ಕಪಿಯು,
ವಿಕಾಸಗೊಂಡ ಜೀವವು;
ನಾನು ಭ್ರೂಣ, ನಾನು ಪ್ರಾಣ,
ಬೆಳವಣಿಗೆಯ ಸೂತ್ರವು.

ಮೆಟ್ಟಿಲನ್ನು ಮೆಟ್ಟಿಮೆಟ್ಟಿ ಮೇಲೆಮೇಲೆ ನಡೆಯಬೇಕು,
ಒಂದೆ ಹೆಜ್ಜೆಯಲ್ಲಿ ಸ್ವರ್ಗ ಸೃಷ್ಠಿಯಲ್ಲಿ ಎಲ್ಲೂ ಇಲ್ಲ;
ಕಲ್ಲುಕಲ್ಲು ಕಟ್ಟಿಮಾತ್ರ ರಾಜಮಹಲು ಬರಲು ಸಾಧ್ಯ,
ದಿನದಿನ ಉಂಡುಮಾತ್ರ ದೇಹಮನಸಿನ ಬಲಿಕೆ ಸಾಧ್ಯ,
ಮಾಯಮಂತ್ರದಂತೆ ಕ್ಷಣದಿ ದೇಶಗೆಲುವ ಹುಚ್ಚು ಸಲ್ಲ;
ಇಲ್ಲಿ ಎಲ್ಲ ಹತ್ತಿ ಹತ್ತಿ ಮರದ ತುದಿಯನೇರಬೇಕು,
ಹುಡುಕಿಹುಡುಕಿ ಹಣ್ಣುಕಿತ್ತು ಶ್ರಮದ ಫಲ ತಿನ್ನಬೇಕು,
ಉಚಿತ ಊಟ ಎಲ್ಲೂ ಇಲ್ಲ, ಅಡ್ಡ ದಾರಿಗೆ ಬೆಲೆಯೆ ಇಲ್ಲ;
ಕದ್ದುಗೆದ್ದವ ತುಂಬಕಾಲ ತನ್ನ ಲೂಟಿಯ ತಿನ್ನಲಾರ,
ಮೋಸಕಪಟ ತೋರಿದಾತ ತಾನೇ ಹಣೆದ ಬಲೆಯ ಒಳಗೆ
ಸಿಕ್ಕಿ ತೊಯ್ಯತೊಯ್ಯ ಉಡುಗಿ ತನ್ನ ಹೊಂಡಕ್ಕಿಳಿಯುತ್ತಾನೆ;
ಕ್ಷಣದ ಕ್ಷುದ್ರ ಲಾಭದಿಂದ ಸ್ಥಿರಸುಖದ ಸ್ವತ್ತುಬರದು,
ಶ್ರಮದ ಪ್ರೌಢತೆ ಬರುವತನಕ ಸಾಧನೆಯ ಸುಳಿವೆ ಇರದು;
ಹೆಜ್ಜೆಹೆಜ್ಜೆ ನಡೆದ ಮೇಲೆ ಸಜ್ಜೆಸುಖದ ತೃಪ್ತಿಯುಂಟು,
ಸೃಷ್ಠಿಕ್ರಿಯೆಯಲ್ಲಿ ಇದು ಮೂಡಿಬಂದ ಮೊದಲ ಪಾಠ.

ಬಾಲ್ಯವೊಂದು ಹಸುರುಲೋಕ,
ಬೆಳವಣಿಗೆಯ ಸನ್ನಹ;
ಪ್ರೌಢತೆಯ ಚಕ್ರವ್ಯೂಹಕೆ
ಸಜ್ಜುಗೊಳಿಸುವ ವಿಧಾನವು.

ಶೂನ್ಯಶೂನ್ಯ ಗುಣಿಸಿದಾಗ ಶೂನ್ಯಮಾತ್ರ ಬರಲು ಸಾಧ್ಯ,
ಯತ್ನಯತ್ನ ಗುಣಿಸಿದಾಗ ರತ್ನ ಮೂಡಿಬರುವುದುಂಟು;
ಸೊನ್ನೆ ಬೆಣ್ಣೆಕೊಡುವುದಿಲ್ಲ, ಬೆಣ್ಣೆಯಿರದೆ ತುಪ್ಪಬರದು,
ಒಂದರಿಂದ ಹತ್ತು ಬಂದು, ನೂರುಕೋಟಿಗೇರಬಹುದು,
ಇದು ಸೃಷ್ಟಿಯ ಮಾದರಿ, ಲೋಕವಿಕಸನ ನಕ್ಷೆಯು;
ಗಿಡವ ನೆಟ್ಟು ಬೆಳೆಸಿದರೆ ಹೂವುಹಣ್ಣು ಹುಟ್ಟಬಹುದು,
ಶ್ರಮಮರೆತ ಮೈಗಳ್ಳ ಎಷ್ಟುದೂರ ನಡೆಯಬಹುದು?
ತೊದಲುನುಡಿಯೆ ಮುಂಬರುವ ಕವಿಕಾವ್ಯದ ಮಹಾದ್ವಾರ;
ಮೊದಲ ಹೆಜ್ಜೆಯಿಂದ ಮಾತ್ರ ಮುಂದೆಮುಂದೆ ನಡೆಯಬಹುದು,
ಸಜ್ಜುಗೊಂಡು ಮುಂದೆನಡೆದರೆ ಅಸಾಧ್ಯವೆಂಬ ಅಳುಕೆಯಿಲ್ಲ,
ಸಿದ್ಧನಿದ್ದರೆ ಎಲ್ಲ ಸಾಧ್ಯ, ಬದ್ಧನಾದರೆ ಯಶಸ್ಸು ಸಿದ್ಧ;
ಸೃಷ್ಠಿನಕ್ಷೆಯ ಗುಟ್ಟನ್ನರಿತು ನಮ್ಮದಾರಿ ನಡೆಯಬೇಕು,
ಹೆಜ್ಜೆಹೆಜ್ಜೆಗೆ ತೊಡರಿಬರುವ ಅಡ್ಡಿಯಾತಂಕ ಬಳ್ಳಿಗಳನು
ತೊಡೆದುನಡೆಯಲು ಸಜ್ಜುಗೊಂಡು ಮುಂದೆಮುಂದೆ ಹೆಜ್ಜೆಯಿಟ್ಟರೆ
ನಾವು ಸೃಷ್ಠಿ ಬೇರೆಯಲ್ಲ, ನಮ್ಮ ದಾರಿಗೆ ತೊಡಕೆಯಿಲ್ಲ.

COMMENTS OF THE POEM
READ THIS POEM IN OTHER LANGUAGES
Close
Error Success