ಅಂದು ಹಾಗಿದ್ದರೆ ಅವಳು, ಈಗ ಹೀಗಿರುತ್ತಿರಲಿಲ್ಲ ನಾವು,
ಇಂದು ಹೀಗಿದ್ದರೆ ನಾವು, ಆಗ ಅದಕೆ ಕಾರಣರು ನಾವು;
ಎಂದು ಹೇಗಿದ್ದರೂ ನಾವು, ಬೆಂಬಿಡದ ನಮ್ಮ ನೋವು,
ಈಗ ಹೀಗಿರುತ್ತಿರಲಿಲ್ಲವೆಂದು ಹೇಗೆ ಹೇಳುವುದು ನಾವು?
ತಲೆಯೆತ್ತಿ ನಿಂತಾಗ ಅವಳು, ತಲೆ ತಗ್ಗಿ ಹಿಂಬಾಲಿಸಿದೆ ನಾನು,
ತಲೆಯೆತ್ತಲು ಯತ್ನಿಸಿದಾಗ, ಕೈಯಿಂದ ಚಿಮ್ಮಿ ಹಾರಿತು ಮೀನು;
ನನ್ನತ್ತ ತಿರುಗಿ ತಿರುಗಿ ನೋಡುತ್ತ ಈಜಿತ್ತು ಬಲು ದೂರ ದೂರ,
ಕೈಲಾಗದೆ ಸ್ವರವೇರದೆ ನೋಡುತ್ತ ನಿಂತಲ್ಲೆ ನಿಂತೆ ದಿನಾಪೂರ.
ಅವಳದೋ ಭಯನಾಚುಗೆಯ ಹೃದಯ ವೈಶಾಲ್ಯ,
ನನಗೋ ಅವಿವೇಕ, ಅಧೈರ್ಯ, ಶಿಷ್ಟಾಚಾರ ವಿನಯ;
ಎರಡು ಮಣೆಗಳ ಮಧ್ಯೆ ಮುಗ್ಗರಿಸಿದ ನಮ್ಮ ಪ್ರಣಯ
ಮತ್ತೆ ಮೇಲೇರಲಿಲ್ಲ, ಕ್ಷಮಾದಾನ ನಮ್ಮ ಕೈಹಿಡಿಯಲಿಲ್ಲ.
ಸಾವಿರ ಹರದಾರಿ ಹರಿದ ನಮ್ಮ ದೂರ ದೂರ ತರಂಗ
ಹಗ್ಗವಾಗಿ ಬಿಗಿಯಾಗಿ ಹೊಸೆದಿದೆ ಈಗ ನಮ್ಮಂತರಂಗ;
ನಾನೇ ಅವಳಾದೆ, ಅವಳೇ ನಾನಾದೆ, ಬಿಗಿದ ಅಂಗಾಂಗ,
ಬಿಡಿಸಲಾಗದಷ್ಟು ಬಿಗಿದಿದೆ ನಮ್ಮ ಆತ್ಮ ಹೃದಯದ ಸಂಗ.
ಅದು ಅವಳ ಲೋಕ, ಮತ್ತೆ ಇದು ನನ್ನ ಲೋಕ,
ಎರಡನ್ನೊಂದಾಗಿ ಹೊಸೆಯುವುದೆ ನಮ್ಮ ಧ್ಯೇಯ;
ಇದು ನಮ್ಮ ಕನಸು, ತಪಸ್ಸು, ಈ ಜೀವನದ ಲಕ್ಷ್ಯ,
ಅಲ್ಲಿ ಇಲ್ಲಿ ಜೊತೆಯಲ್ಲಿ ನಡೆವ ತನ್ಮತೆಯ ಯಾಗ.
ಸೂರ್ಯಚಂದ್ರರಂತೆ ಸುತ್ತು ಸುತ್ತು ಸುತ್ತುವುದ ಬಿಟ್ಟು,
ದಶಕಗಳ ಹಂಬಲಿಕೆ ನಮಗೆ ಕೊಟ್ಟದ್ದು ಬರೆ ಸೊನ್ನೆ;
ಕಾಲ ಕುಂದಿದೆ, ಪ್ರಾಯವಳಿದಿದೆ ನಮಗೆ ಈಗ ಇಷ್ಟು,
ನಮ್ಮೊಲವಿನ ಈ ತಪಸ್ಸು ಫಲಿಸುವುದೆಯೆಂಬ ಚಿಂತೆ.
ಚಿಕ್ಕ ತಪ್ಪು; ಈಗ ಅದೆಷ್ಟು ದೀರ್ಘ ನೋವಿನ ಭ್ರಮಣ?
ಸೃಷ್ಟಿಯ ಹೃದಯಕೆ ಇಲ್ಲವೆ ಕಿಂಚಿತ್ತೂ ಕ್ಷಮೆಯ ಗುಣ?
ಪಶ್ಚತ್ತಾಪದ ಬೆಂಕಿ, ಪ್ರೀತಿಯನವರತ ನಂದಾದೀಪ
ಪ್ರಕೃತಿಯಂತಃಕರಣವ ಹಚ್ಚದಂತಿದೆಯೆ ನಮಗೆ ಶಾಪ?
ಏನಾದರೇನು, ಪ್ರೀತಿಗೆ ಹೊರಲೋಕಗಳ ಪರಿವೆಯೆ ಇಲ್ಲ,
ಅದಿಟ್ಟದ್ದೆ ಹದ್ದು, ಅದು ನಡೆದದ್ದು ಒಂದೆ ಅದರ ನಿಯಮ;
ಈಗಲೋ ನಾಳೆಲೋ, ಪ್ರೀತಿಯ ಬಿಗಿಯಲ್ಲಿ ಹೊಸೆದ ಜೀವ,
ಒಂದಾಗಿ ಒತ್ತರಿಸುವುದು ಸೃಷ್ಟಿಯ ಅನಿವಾರ್ಯ ಅಂಗ.
ನಿನ್ನೆಯ ಎಡವಟ್ಟು, ಇಂದಿನ ವಿರಹ ನೋವು, ಪೆಟ್ಟು,
ಪ್ರೀತಿ ಮೈಮೇಲಿನ ಹರಕು ಪರಚುಗಳು ಮಾತ್ರ;
ಆತ್ಮದಾತ್ಮದಲಿ ಹಚ್ಚಿದ ನಮ್ಮ ಪ್ರೀತಿಯ ಮಹಾಜ್ವಾಲೆ
ಸತ್ಯಾಸತ್ಯತೆ ಸೃಷ್ಟಿಮಿತಿ ಮೀರಿ ಹರಿವ ಸುಪ್ತ ಶಕ್ತಿ ಮಾಲೆ.
This poem has not been translated into any other language yet.
I would like to translate this poem