ಮಿಂಚಿನಂತೆ ಮಿಂಚಿ, ಮರೆಯಾಗುವ ಓ ವೈಯಾರಿ,
ಒಂದರೆ ಕ್ಷಣ ನಿಂತು, ನಿನ್ನ ಮೈಸಿರಿ ತೋರು;
ಕಣ್ಣ ಹೊಳಪಿಗೆ ತಾಕಿ, ಸೋಕಿ, ಜಾರುವ ಓ ವೈಯಾರಿ,
ಕಣ್ಣ ಬೆಳಕಿನ ಸುಳಿಯಲ್ಲಿ, ಸೆರೆಯಾಗಿ ನಿಲ್ಲು;
ನನ್ನ ಕಣ್ಣ ಹೊಳಪಲ್ಲಿ ತೇಲಾಡುವ ಚಿನ್ನದ ಮೀನೆ,
ಕ್ಷಣಾರ್ಧದಲಿ ಮೈಝಮ್ಮೆನಿಸುವ ರಸಸೋನೆ,
ಬೇಲೂರಿನ ಶಿಲಾಬಾಲಿಕೆಯ ಹಾಗೆ ನಿಂತು,
ನಿನ್ನಂಗಾಂಗ ಸಾಷ್ಠವದ ಸ್ಥಿರ ಮನೋಹರತೆ ಚೆಲ್ಲು;
ನಿನ್ನ ಲಾವಣ್ಯ ಸಾಗರದ ತೆರೆಗಳ, ಪ್ರತಿಯೊಂದು ಮೊರೆತ,
ಹರಿಸುತ್ತಿದೆ ಅಶೆ, ಆಸಕ್ತಿ, ಚೈತನ್ಯದೊರೆತ;
ವರ್ಣಮಯ ಕನಸು, ಮಿಂಚು ಸೆಳೆಗಳ ಸೆಳೆತ,
ನನ್ನ ನಿನ್ನೆಡೆಗೆಳೆಯುತ್ತಿದೆ, ಪ್ರತಿಯೊಂದು ನಿಮಿಷ;
ಇದು ದಿವ್ಯತೆಯತ್ತ ಲೋಕ ವಿಕಸನದ ಸೆಳೆತವೊ,
ದೀಪದೆಡೆ ಚಂಚಲ ಹಾತೆಯ ಎಳೆತವೊ, ಕಾಣೆÉ;
ಏನಿದ್ದರೂ, ನೀನೆನ್ನ ಬಯಕೆಯ ಕೊನೆಯ ಗುರಿ,
ನೀನೆಲ್ಲಿದ್ದರೂ, ನಿನ್ನ ಹಿಡಿದು ನಿಲ್ಲಿಸುವುದೆ ಸರಿ;
ನಿನ್ನ ಮಿಂಚಿನಾಟಕೆ ಸರಿದೊರೆ ಮಿಂಚಿನಾಟವ ಹೂಡಿ,
ನಾನೂ ದಿಗಂತದ ತುಂಬ, ಮಿಂಚಾಗಬೇಕೆಂದಾಸೆ;
ನಿಂತ ನೆಲವನು ಮೀರಿ, ಆಕಾಶದೆತ್ತರಕೆ ಹಬ್ಬಿ,
ಅಷ್ಟದಿಕ್ಕುಗಳ ದಾಟಿ, ಬಯಕೆ ಬಳ್ಳಿಯ ಚೆಲ್ಲಿ,
ನಿನ್ನ ಸ್ಪಷ್ಟ ರೂಪದ ಸಾಕಾರಕ್ಕೆ ಕಾತರಿಸುತ್ತಿರುವೆ.
This poem has not been translated into any other language yet.
I would like to translate this poem