ಕರೆಯದೆಲೆ ಬಂದವಳು ನೀನು Poem by PRAVEEN KUMAR Kannada Songs

ಕರೆಯದೆಲೆ ಬಂದವಳು ನೀನು

ಕರೆಯದೆಲೆ ಬಂದವಳು ನೀನು,
ಬಯಸಿದುದನಿತ್ತ ಕಾಮಧೇನು,
ಯಾವ ಜನ್ಮದ, ಅದಾವÀ ತಪಸ್ಸು,
ಪರಿಪಕ್ವಗೊಂಡ ಫಲಿತಾಂಶ ನೀನು?

ಹಲವು ಕದಗಳ ದಾಟಿ, ನಿನ್ನ ಬಳಿ ಬರಲೆಂದು,
ಪರಿತಪಿಸಿ ಬಿಟ್ಟ ನಿಟ್ಟುಸಿರುಗಳೆಷ್ಟೊ;
ಗಾಳಿ ಗುದ್ದಾಟದಲಿ ನೊಂದು, ಕೈಲಾಗದೆ ನಿಂದು,
ನಿರಾಶೆ, ನಿದ್ರೆ ಜೋಂಪಿನಲಿ, ತೂಕಡಿಸುವ ನನ್ನ ಬಳಿ,
ಕರೆಯದೆಲೆ ಬಂದವಳು ನೀನು,
ಬಯಸಿದುದನಿತ್ತ ಕಾಮಧೇನು.

ಶೂನ್ಯದಿಂದ ಶೂನ್ಯಕ್ಕೆ, ಹಬ್ಬಿರುವ ಗದ್ದಲದಲ್ಲಿ,
ನಿನ್ನ ನೀರವತೆಯ ಎಳೆಯಲ್ಲೆ ಸಾಗಿರಲು,
ಅರುಣೋದಯದ, ಸುಶ್ರಾವ್ಯ ಚಿಲಿಪಿಲಿ ಧಾಟಿಯಲಿ,
ಹೊಸ ಚೇತನ ಚಿಲುಮೆ ಮೈಯಾಂತು ನೀನು ಬಂದೆ,
ಹೊಸ ಜೀವ, ಆಹ್ಲಾದ, ಜೀವನಕೆ ತಂದೆ.

ಭೂಮಿ ಆಕಾಶಗಳ ಅಪಾರ ಚುಂಬನಕೆ,
ದಕ್ಷಣೋತ್ತರವೆಂದು, ದಿಕ್ಕುಗಳಂತರವೆ?
ನಿನ್ನ ನನ್ನೀ ಅನವರತ ಸಂಗಮಕೆ,
ಈ ಕಾಲ, ಆ ಕಾಲ, ಅಕಾಲವೊಂದಂತರವೆ?

ನೀನೊಂದು ಬಿಂದು, ನಾನದರ ಪರಿಧಿಯ ಚಲನೆ,
ನಾನು ಪ್ರಾಣ, ನೀನದರಲ್ಲಿಳಿದೇಳುವ ಜೀವ;
ಅಂದು, ಇಂದನು ಮೀರಿ, ಮುಂದೆ ಮುಂದಕೆ ನಾವು,
ಮತ್ತೆ ಕೂಡುವ ಎಂದೆ, ಮತ್ತೆ ಮತ್ತೆ ಅಗಲುತ್ತ,
ಪ್ರಕೃತಿಯ ರೆಕ್ಕೆಯಲಿ, ಕಾಲಾಂತÀರ ಸುತ್ತಿ,
ಶೋಕ ದುಗುಡವ ಮರೆತು, ಮೈಮನ ಮರೆಯೋಣ.

Tuesday, April 26, 2016
Topic(s) of this poem: love
COMMENTS OF THE POEM
READ THIS POEM IN OTHER LANGUAGES
Close
Error Success