ಬಂಧನಗಳ ಒಗೆದು, ದೂರಗಳ ಅಗೆದು,
ಭಾವಗಳ ಭುಜವೇರಿ ಹಾರಿ ಬಾ ಬಳಿಗೆ,
ಬಾಂಧವ್ಯ ಅರಿತು, ಕಾಲಾಂತರ ಮರೆತು,
ಆತ್ಮ ಶ್ರುತಿಗೆ ಕಿಮಿಟ್ಟು ಓಡಿ ಬಾ ಬಳಿಗೆ.
ನೀ ಬರುವೆಯೆಂದು ಕಾದಿರುವೆನಿಂದು
ಮನೆಯಂಗಳ ಗುಡಿಸಿ, ಮನದಂಗಳ ತೆರೆದಿರಿಸಿ,
ಹೃದಯ ಬಾಗಿಲ ಎದುರು ದೀಪಗಳ ಉರಿಸಿ,
ಆತ್ಮದಾರತಿ ಬೆಳಗಿ, ಪ್ರೀತ್ಯಾದರಗಳ ಹರಿಸಿ.
ಕಾಡುಗಳ ಕಡಿದು ಬಾ, ನಾಡುಗಳ ನೆಗೆದು ಬಾ,
ಮೋಡಗಳನೇರಿ ಬಾ, ದಿಕ್ಕುಗಳ ತೂರಿ ಬಾ,
ಬೆಳಗಿನ ಕಿರಣಗಳ ನೂಲೇಣಿ ಹಿಡಿದು ಬಾ,
ಅಲ್ಲಿಂದ ಇಲ್ಲಿನ ನೇರಕ್ಕೆ ಜಿಗಿದು ಬಾ.
ನೀನಲ್ಲಿ ಬರುವಾಗ ಹೊಸ ಜೀವ ಕಾರಂಜಿ,
ಹೊಸರಾಗ, ಸಂಗೀತ, ಋತುಗಾನ ಚಿಮ್ಮಿ,
ಹೊಸ ಅಶೆ, ಹೊಸ ಭಾಷೆ, ಹೊಸ ಭಾವ ಹಿಂಜಿ
ಹೊಸಾನುಭವದಲ್ಲಿ ತೊಯ್ಯಲಿದೆ ಭೂಮಿ.
ಬರುವೆನೆಂಬ ಒತ್ತಾಸೆ ದಾರಿ ನೀ ಹಿಡಿದು ಬಾ,
ನಿನ್ನಾಸೆ ಭಾವಗಳ ಅವಿತಿಟ್ಟು ಬಳಿಗೆ ತಾ,
ನನ್ನಾಸೆ ನಿನ್ನಾಸೆ, ನಮ್ಮಾತ್ಮ ಹೃದಯಗಳು
ಒಂದಾಗಿ ಜೊತೆಯಾಗಿ ಹಾಡುವುದು ಏನಂದ!
ನೀ ಹಾಗೆ ಬಾ, ಹೀಗೆ ಬಾ, ಬೇಕೆಂದ ಹಾಗೆ ಬಾ,
ನೀ ನನ್ನಲ್ಲೆ ಇಳಿದು, ಹೃದಯ ಮಾತ್ರ ಮುಟ್ಟಿ ಬಾ,
ನಿನ್ನಮೃತ ಹಸ್ತದಲಿ ದೇವತ್ವದ ಶಕ್ತಿುದೆ,
ಹೃದಯ ದಾಹ ತಣಿಸುವ ನೆಚ್ಚು ಪ್ರೀತಿ ಭಕ್ತಿುದೆ.
ತಾರೆಗಳ ದೀಪದಲಿ ನಿಹಾರಿಕೆಯ ಪಥ ಹಿಡಿದು
ಸೂರ್ಯ ಚಂದಿರ ಹಿಲಾಲು ಬೆಳಕಲ್ಲಿ ಬಾ,
ನನ್ನ ಲೋಕದ ತುಂಬ ಬಣ್ಣ ಬಣ್ಣವ ಬಡೆದು
ಕನಸು ಕಲ್ಪನೆ ಬಿಚ್ಚಿ ಒಳಗೊಯ್ಯುವೆನು, ಬಾ.
ಹೃದಯ ಭಿತ್ತಿಯ ಒಳಗೆ, ರತ್ನ ಸಿಂಹಾಸನದಲ್ಲಿ
ಕಣ್ಣು ಹೊಳಪಿನ ಚಿನ್ನ ತೇಜೋಮಂಡಲ ಮಧ್ಯೆ
ಆತ್ಮ ಸ್ಪಟಿಕದ ದಿವ್ಯ ಹಾಸು ಮೆತ್ತೆಯ ಮೇಲೆ
ಪ್ರೀತಿ ಚಾಮರ ಬೀಸಿ ನಿನ್ನ ದಣಿವಾರಿಸುವೆ.
ಉತ್ತರದಿ ದಕ್ಷಿಣಕೆ, ಪಶ್ಚಿಮದಿ ಪೂರ್ವಕ್ಕೆ
ನೀ ಬರುವಿ ಎಂಬುತ್ಸಾಹದ ತಳಿರು ತೋರಣ ಕಟ್ಟಿ
ಸ್ವಾಗತಕೆ ನಿಂತಿರುವ ನನ್ನ ನಿರಾಶೆಗಳಸದೆ
ನಿರ್ಧಾರದ ಹೆಜ್ಜೆಯಲಿ ನನಗೆ ಸ್ಪಂದಿಸಿ ಬಾ.
ಬಯಸಿದ ಮನಸುಗಳು, ಬಯಸಿದ ಹೃದಯಗಳು
ಒಂದಾಗಿ ಬೆರೆವಾಗ ಜೀವಗಳು ತುಂಬುವುವು,
ಆತ್ಮಗಳು ಬೆರೆತು ಕರಗಿ ಬೆಳಕಾಗಿ ಹಬ್ಬುವುವು,
ಆ ದಿವ್ಯ ಸುಖಕ್ಕಾಗಿ ಕಾದಿರುವೆ, ಬಾ.
ನೀನೆಲ್ಲಿದ್ದರು ಬಂದೆ ಬಾ, ಹೇಗಿದ್ದರು ಬಂದೆ ಬಾ.
ದಣಿದಿರುವ ಜೀವಕ್ಕೆ ಚೇತನವಾಗಿ ಬಾ,
ಮುರಿದಿರುವ ಕನಸಿಗೆ ಅಭಯವಾಗಿ ಮೂಡಿ ಬಾ,
ಹತಾಶೆ ನೆಲ ಹಿಡಿದಿರುವ ನನ್ನ ಮೇಲೆತ್ತೆ ಬಾ.
This poem has not been translated into any other language yet.
I would like to translate this poem